ಉಡುಪಿ: ಖಾಸಗಿ ಬಸ್ಸು ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಕಟಪಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ಪಾಂಗಾಳದಲ್ಲಿ ಸೋಮವಾರ ನಡೆದಿದೆ.
ಮೃತರನ್ನು ಮಲ್ಪೆ ಪಡುಕೆರೆ ನಿವಾಸಿ ಕೃಷ್ಣ ಎಂದು ಗುರುತಿಸಲಾಗಿದೆ.
ಸ್ಕೂಟರ್ ನಲ್ಲಿ ಪಾಂಗಾಳ ಸಮೀಪ ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಆಗಮಿಸುತ್ತಿದ್ದ ಕೃಷ್ಣ ಅವರಿಗೆ ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ಸು ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಅವರು ಕೊನೆಯುಸಿರೆಳೆದಿದ್ದಾರೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದಿಂದ ಬಸ್ಸು ರಸ್ತೆಯಲ್ಲೇ ಇದ್ದ ಪರಿಣಾಮ ಕೆಲಕಾಲ ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಯಿತು. ಮಾರ್ಗಮಧ್ಯೆ ತೆರಳುತ್ತಿದ್ದ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್ ಅವರು ಸಾರ್ವಜನಿಕರೊಂದಿಗೆ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಿದರು.




