ಬೆಳ್ತಂಗಡಿ : ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವಾಪ್ತಿಯ ಗುರುವಾಯನಕೆರೆ ಶಕ್ತಿ ನಗರ ಮೈದಾನದಲ್ಲಿ ರವಿವಾರ ಹಮ್ಮಿಕೊಳ್ಳಲಾದ ‘ಸರಕಾರದ ನಡೆ ಕಾರ್ಯಕರ್ತರ ಕಡೆ’ ಸಮಾವೇಶವನ್ನು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ಶಕ್ತಿ. ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳನ್ನು ಇನ್ನಷ್ಟುಹೆಚ್ಚಿನ ರೀತಿಯಲ್ಲಿ ಜನರಿಗೆ ತಲುಪಿಸಲು ಪ್ರಯತ್ನ ಮಾಡಬೇಕು. ಕಾಂಗ್ರೆಸ್ ಪಕ್ಷದಿಂದ ಮಾತ್ರ ದೇಶದ ಸಮಗ್ರ ಪ್ರಗತಿ ಸಾಧ್ಯ. ಮುಂದಿನ ಚುನಾವಣೆಯಲ್ಲಿ ಕರಾವಳಿಯಿಂದ ಕನಿಷ್ಠ 10 ಮಂದಿ ಆಯ್ಕೆಯಾಗಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಕರಾವಳಿಯಲ್ಲಿ ಉದ್ಯೋಗ ಸೃಷ್ಟಿ ಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಲಾಗುವುದು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಶಾಸಕ ಅಶೋಕ್ ಕುಮಾರ್ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ವಕ್ತಾರರಾದ ನಿಕೇತ್ ರಾಜ್ ಮೌರ್ಯ, ಸುಧೀರ್ ಕುಮಾರ್ ಮುರೊಳ್ಳಿ, ಮಾಜಿ ಸಚಿವರಾದ ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಮೊದಲಾದವರಿದ್ದರು.