ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಗ್ರಾಮದಲ್ಲಿ ನಡೆದ ಮನೆ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕುಖ್ಯಾತ ಅಂತರ್‌ರಾಜ್ಯ ಕಳ್ಳ ಉಮೇಶ್ ಬಳೆಗಾರ @ ಉಮೇಶ್ ಪಿ @ ಉಮೇಶ್ ರೆಡ್ಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ತಮಿಳುನಾಡು ಮೂಲದ ಪ್ರಸ್ತುತ ಮಲ್ಲಾರು ಫಕೀರನಕಟ್ಟೆ ನಿವಾಸಿ ಉಮೇಶ್ ಬಳೆಗಾರ @ ಉಮೇಶ್ ಪಿ @ ಉಮೇಶ್ ರೆಡ್ಡಿ (47) ಎಂದು ಗುರುತಿಸಲಾಗಿದೆ.
ಡಿಸೆಂಬರ್ 4, 2025ರಂದು ಹಗಲು ವೇಳೆ ಮಲ್ಲಾರು ಗ್ರಾಮದ ರಾಮನಾಥ ಕೃಪಾ ಎಂಬ ಮನೆಯ ನಿವಾಸಿ ರಾಘವೇಂದ್ರ ಕಿಣಿ ಅವರು ಮನೆಗೆ ಹೊರಗಿನಿಂದ ಬೀಗ ಹಾಕಿ ಕೀಲಿಯನ್ನು ವಿದ್ಯುತ್ ಮೀಟರ್ ಬಾಕ್ಸ್‌ನಲ್ಲಿ ಇಟ್ಟು ತೆರಳಿದ್ದರು.
ಈ ಸಂದರ್ಭ ಕಳ್ಳರು ಮೀಟರ್ ಬಾಕ್ಸ್‌ನಲ್ಲಿದ್ದ ಕೀಲಿಯನ್ನು ಬಳಸಿ ಮನೆ ಬಾಗಿಲು ತೆರೆದು ಒಳಗಿನಿಂದ ಲಾಕ್ ಮಾಡಿಕೊಂಡು, ಬೆಡ್‌ರೂಂನ ಕಪಾಟಿನಲ್ಲಿ ಇಟ್ಟಿದ್ದ ಸುಮಾರು ₹3.90 ಲಕ್ಷ ಮೌಲ್ಯದ 72 ಗ್ರಾಂ ಚಿನ್ನದ ಆಭರಣಗಳು ಹಾಗೂ ಸುಮಾರು ₹1,500 ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಉಮೇಶ್ ಬಳೆಗಾರ ವಿರುದ್ಧ ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 16 ಪ್ರಕರಣಗಳು ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ ಸುಮಾರು 17 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸುಮಾರು 8 ಪ್ರಕರಣಗಳಲ್ಲಿ ಈಗಾಗಲೇ ಶಿಕ್ಷೆಯಾಗಿದೆ.
ಕೇರಳದ ತನ್ನಿಪಲಂ, ಮಾವೂರು, ತ್ರಿಶೂರ್ ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಬೆಳ್ತಂಗಡಿ, ಪುತ್ತೂರು ನಗರ, ಮೂಡಬಿದ್ರೆ, ಉತ್ತರ ಕನ್ನಡ ಜಿಲ್ಲೆಯ ಶಿರ್ಸಿ ಗ್ರಾಮಾಂತರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಠಾಣೆಗಳಲ್ಲಿ ಜಾಮೀನುರಹಿತ ಬಂಧನ ವಾರಂಟ್‌ಗಳು ಜಾರಿಯಾಗಿವೆ.



