Home Latest ಪ್ರೊ. ಕೆ.ಪಿ. ರಾವ್ಗೆ ಡಾ.ಉಪಾಧ್ಯಾಯ ಸಂಶೋಧನಾ ಪ್ರಶಸ್ತಿ…!!

ಪ್ರೊ. ಕೆ.ಪಿ. ರಾವ್ಗೆ ಡಾ.ಉಪಾಧ್ಯಾಯ ಸಂಶೋಧನಾ ಪ್ರಶಸ್ತಿ…!!

ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಮೂಲಕ ಕೊಡಮಾಡುವ ಡಾ. ಯು.ಪಿ. ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ಸಂಶೋಧನಾ ಪ್ರಶಸ್ತಿಗೆ ಕನ್ನಡ ಕೀಲಿಮಣೆ ವಿನ್ಯಾಸಕಾರ, ನಾಡೋಜ ಉಡುಪಿಯ ಪ್ರೊ. ಕೆ.ಪಿ. ರಾವ್ ಆಯ್ಕೆ ಆಗಿದ್ದಾರೆ.

ಬಹುಭಾಷಾ ವಿದ್ವಾಂಸರೂ ಆಗಿರುವ ಪ್ರೊ. ರಾವ್, ತುಳು ನಿಘಂಟು ರಚನೆ ಮತ್ತು ಸಂಶೋಧನಾ ಕ್ಷೇತ್ರ ಮತ್ತು ಭಾರತೀಯ ಭಾಷೆಗಳ ಗಣಕೀಕರಣದ ಕಾರ್ಯದಲ್ಲಿ ಅತ್ಯಂತ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಕನ್ನಡ ಕೀಲಿಮಣೆ ವಿನ್ಯಾಸಕ್ಕೆ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವೆಂಬ ಮಾನ್ಯತೆ ದೊರೆತಿದೆ.

1940ರ ಫೆ.29ರಂದು ಮಂಗಳೂರು ಸಮೀಪದ ಕಿನ್ನಿಕಂಬಳದಲ್ಲಿ ಜನಿಸಿದ ಅವರು, 1959ರಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನಿಂದ ಬಿಎಸ್ಸಿ ಪದವಿ ಗಳಿಸಿ ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ನ ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರಾಗಿ ವೃತ್ತಿ ಜೀವನ ಆರಂಭಿಸಿದರು.

1970ರ ದಶಕದಲ್ಲಿ ಟಾಟಾ ಪ್ರೆಸ್ಗೆ ಸೇರ್ಪಡೆಯಾದ ನಂತರ ಅಕ್ಷರ, ಮುದ್ರಣ ಮತ್ತು ಭಾಷಾ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದರು. ಮಾನೋಟೈಪ್ ಸಂಸ್ಥೆಯ ನಿರ್ದೇಶಕರಾಗಿ, ಕ್ವಾರ್ಕ್ ಎಕ್ಸ್ಪ್ರೆಸ್ ಮತ್ತು ಅಡೋಬ್ ಸಿಸ್ಟಂಸ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳಿಗೆ ಸಲಹೆಗಾರರಾಗಿ ಹಾಗೂ ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಪ್ರಶಸ್ತಿಯು 10 ಸಾವಿರ ರೂ. ನಗದು, ಫಲಕ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.