ಉಡುಪಿ: ಮಣಿಪಾಲದಲ್ಲಿ ಸಂಚಾರ ನಿಯಮಗಳನ್ನು ಗಾಳಿಗೆ ತೂರಿರುವ ವಿದ್ಯಾರ್ಥಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ.
ಘಟನೆ ವಿವರ: ದಿನಾಂಕ 17.04.2025 ರಾತ್ರಿ ಸಮಯ ಮಣಿಪಾಲ ಸರಹದ್ದಿನಲ್ಲಿ ಓರ್ವ ಸ್ಕೂಟರ್ ಚಾಲಕನು ನಾಲ್ಕು ಜನ ಸಹ ಸವಾರರನ್ನು ಸ್ಕೂಟರ್ನಲ್ಲಿ ಕುಳ್ಳಿರಿಸಿಕೊಂಡು ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಸವಾರಿ ಮಾಡಿಕೊಂಡು ಹೋದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಈ ದಿನ ಈ ಸ್ಕೂಟರ್ ಸವಾರರನ್ನು ಮತ್ತು ಸ್ಕೂಟರನ್ನು ಪತ್ತೆಹಚ್ಚಲಾಗಿದ್ದು ಸದ್ರಿ ಸ್ಕೂಟರ್ ಸವಾರರು ಮಣಿಪಾಲದ ಮಾಹೆಯ ಇಬ್ಬರು ವಿದ್ಯಾರ್ಥಿಗಳು ಮತ್ತು ಮೂವರು ಮೈನರ್ ವಿದ್ಯಾರ್ಥಿಗಳಾಗಿರುವುದು ತಿಳಿದು ಬಂದಿರುತ್ತದೆ. ಸ್ಕೂಟರ್ ಚಾಲನೆ ಮಾಡುತ್ತಿದ್ದ ಸವಾರನಿಗೆ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದ ತಪ್ಪಿಗಾಗಿ ರೂ. 10,500/- ದಂಡ ವಿಧಿಸಿರುವುದಾಗಿರುತ್ತದೆ.