ಬೆಳ್ತಂಗಡಿ: ಬಂದಾರು ಗ್ರಾಮದ ನಿರ್ಮುಡ ಎಂಬಲ್ಲಿ ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆ.3 ರಂದು ಸಂಜೆ 5.15 ರ ಸುಮಾರಿಗೆ ಬೀಟ್ ಸಿಬ್ಬಂದಿಯಿಂದ ಬಂದ ಮಾಹಿತಿಯ ಮೇರೆಗೆ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ನೇತೃತ್ವದ ಪೊಲೀಸರು ಪಂಚರೊಂದಿಗೆ ನಿರ್ಮುಡ ಪ್ರದೇಶಕ್ಕೆ ದಾಳಿ ಮಾಡಿದಾಗ ಆರೋಪಿಗಳು ಕೋಳಿ ಅಂಕ ಜೂಜಾಟ ನಡೆಸುತ್ತಿರುವುದು ಪತ್ತೆಯಾಗಿದೆ.
ಪೊಲೀಸರನ್ನು ಕಂಡ ಕೂಡಲೇ ಕೆಲವರು ಸ್ಥಳದಿಂದ ಪರಾರಿಯಾಗಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಧರ್ಣಪ್ಪ ಗೌಡ (38), ಹರೀಶ್ ಎಸ್ (30) ಬಂಧಿತ ಆರೋಪಿಗಳು.
ದಾಳಿ ವೇಳೆ ಜೂಜಾಟಕ್ಕೆಂದು ಬಳಸಲಾಗಿದ್ದ 350 ರೂ. ನಗದು, ಎರಡು ಬಾಳು, ವಿವಿಧ ಜಾತಿಯ ನಾಲ್ಕು ಕೋಳಿಗಳು, ಮೂರು ದ್ವಿಚಕ್ರ ವಾಹನಗಳು ಸೇರಿ ಒಟ್ಟು 74,370 ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




