ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರು ನೆಹರುನಗರದ ಅಂಡರ್‌ಪಾಸ್ ಬಳಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ಆರೋಪದ ಮೇರೆಗೆ ಯುವಕನೋರ್ವನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಉಳ್ಳಾಲ ತಾಲೂಕಿನ ಬೋಳಿಯಾರ್ ನಿವಾಸಿ ಮುಹಮ್ಮದ್ ನಾಸೀರ್ (29) ಎಂದು ತಿಳಿದು ಬಂದಿದೆ.
ಅ.30 ರಂದು ರಾತ್ರಿ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರು ಸಿಬ್ಬಂದಿಗಳೊಂದಿಗೆ ಗಸ್ತಿನಲ್ಲಿದ್ದಾಗ ನೆಹರುನಗರ ಅಂಡರ್‌ಪಾಸ್ ಬಳಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತು ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು ಎಂದು ತಿಳಿದು ಬಂದಿದೆ.
ಪೊಲೀಸರು ಸ್ಥಳಕ್ಕೆ ತೆರಳಿದಾಗ ಓರ್ವ ಪರಾರಿಯಾಗಿದ್ದು, ಇನ್ನೋರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ವಶಕ್ಕೆ ಪಡೆದ ಮುಹಮ್ಮದ್ ನಾಸೀರ್ ಮಾದಕ ವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದು, ಆತನ ಬಳಿಯಿದ್ದ ಮೊಬೈಲ್ ಹಾಗೂ ಮಾದಕ ವಸ್ತು ಸೇವನೆಗೆ ಬಳಸುವ ಕನ್ನಡಿ ಗಾಜಿನ ಕೊಳವೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.



