ಉಡುಪಿ : ಕವಿ ಮುದ್ದಣ ಮಾರ್ಗ ಪ್ರಾರಂಭ ಪಡೆಯುವ ತ್ರಿವೇಣಿ ವೃತ್ತದ ಬಳಿ, ನಿರುಪಯುಕ್ತ ಕಬ್ಬಿಣದ ಸಿಗ್ನಲ್ ಕಂಬವಿದ್ದು, ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ. ಕಳೆದ ಹದಿನೈದು ವರ್ಷಗಳ ಹಿಂದೆ ಅಳವಡಿಸಿರುವ ಕಂಬವು ಇದಾಗಿದ್ದು, ಸಿಗ್ನಲ್ ಲೖಟು ಅಳವಡಿಸಿರುವ ಅಡ್ಡಪಟ್ಟಿ ಜಂಗು ಹಿಡಿದು ಬಿರುಕು ಬಿಟ್ಟಿರುವುದು ಕಾಣಿಸುತ್ತಿದೆ. ಈ ಕಂಬವು ಆಗಲೋ ಈಗಲೋ ಮಳೆಗಾಳಿಗೆ ಧರೆಗೆ ಉರುಳುವ ಸ್ಥಿತಿಯಲ್ಲಿದೆ.
ವಾಹನ ದಟ್ಟಣೆ, ಜನಸಂಚಾರ ಇರುವ ನಗರದ ಮುಖ್ಯ ರಸ್ತೆ ಇದಾಗಿದ್ದು. ಶಾಲಾ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಶ್ರೀ ಕೃಷ್ಣ ಮಠಕ್ಕೆ ತೆರಳುವ ಯಾತ್ರಾರ್ಥಿಗಳು ಕಂಬದ ತಳ ಭಾಗದಿಂದ ನಡೆದು ಸಾಗುತ್ತಿರುತ್ತಾರೆ. ಬೀಸುವ ಮಳೆ ಗಾಳಿಗೆ ಕಂಬವು ಉರುಳಿ ಬಿದ್ದು, ಅವಘಡ ಸಂಭವಿಸುವ ಆತಂಕವು ಎದುರಾಗಿದೆ.
ಸಂಭವನೀಯ ದುರಂತವನ್ನು ತಡೆಯೊಡ್ಡಲು, ನಿರುಪಯುಕ್ತ ಸಿಗ್ನಲ್ ಕಂಬವನ್ನು ತಕ್ಷಣವಾಗಿ ಸಂಚಾರ ಪೋಲಿಸ್ ಇಲಾಖೆ, ನಗರಾಡಳಿತ, ಜಿಲ್ಲಾಡಳಿತವು, ತೆರವುಗೊಳಿಸುವಂತೆ, ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ. ಈ ಹಿಂದೆ, ನಾಗರೀಕ ಸಮಿತಿಯ ಕಾರ್ಯಕರ್ತರು ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿದ್ದ ನಿರುಪಯುಕ್ತ ಅಪಾಯ ಆಹ್ವಾನಿಸುತ್ತಿದ್ದ ಕಂಬಗಳ ತೆರವುಗೊಳಿಸಲು ಆಗ್ರಹಪಡಿಸಿದ್ದರು.
ಸ್ಪಂದಿಸಿದ ಇಲಾಖೆಯವರಿಂದ ಕಂಬಗಳ ತೆರವು ಕಾರ್ಯಚರಣೆ ನಡೆದಿತ್ತು. ಆದರೆ ತ್ರಿವೇಣಿ ವೃತ್ತದ ಸಿಗ್ನಲ್ ಕಂಬ ಮಾತ್ರ ತೆರವು ಕಾಣದೆ ಬಾಕಿಯಾಗಿ ಉಳಿದುಕೊಂಡಿದೆ.





