Home Crime ಅಂಬ್ಯುಲೆನ್ಸ್‌ಗೆ ದಾರಿ ಬಿಡುವ ವೇಳೆ ಸರಣಿ ಡಿಕ್ಕಿ : ತಪ್ಪಿದ ಭಾರೀ ಅನಾಹುತ..!!

ಅಂಬ್ಯುಲೆನ್ಸ್‌ಗೆ ದಾರಿ ಬಿಡುವ ವೇಳೆ ಸರಣಿ ಡಿಕ್ಕಿ : ತಪ್ಪಿದ ಭಾರೀ ಅನಾಹುತ..!!

ಬಂಟ್ವಾಳ: ಭಂಡಾರಿಬೆಟ್ಟು ಸಮೀಪ ಅಂಬ್ಯುಲೆನ್ಸ್ ವಾಹನಕ್ಕೆ ದಾರಿ ಬಿಡುವ ವೇಳೆ ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾಗಿಲ್ಲ.

ಮಾಹಿತಿಯ ಪ್ರಕಾರ, ಸೈರನ್ ಹಾಕಿಕೊಂಡು ತುರ್ತು ಚಿಕಿತ್ಸೆಗೆ ತೆರಳುತ್ತಿದ್ದ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವ ಉದ್ದೇಶದಿಂದ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಪಿಕಪ್ ವಾಹನ ಹಾಗೂ ಕಾರಿನ ಚಾಲಕರು ತಮ್ಮ ವಾಹನಗಳ ವೇಗವನ್ನು ಕಡಿಮೆ ಮಾಡಿ ರಸ್ತೆ ಬದಿಗೆ ಸರಿಯಲು ಪ್ರಯತ್ನಿಸಿದ್ದಾರೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಸರಕಾರಿ ಬಸ್ ಸಮಯಕ್ಕೆ ನಿಯಂತ್ರಿಸಲು ಸಾಧ್ಯವಾಗದೆ, ಮೊದಲು ಕಾರಿಗೆ ಡಿಕ್ಕಿ ಹೊಡೆದಿದ್ದು, ಅದರ ಪರಿಣಾಮ ಕಾರು ಮುಂದೆ ಇದ್ದ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ.

ಘಟನೆಯಿಂದ ಮೂರು ವಾಹನಗಳಿಗೂ ಸಣ್ಣ ಪ್ರಮಾಣದ ಹಾನಿ ಸಂಭವಿಸಿದ್ದು, ಯಾವುದೇ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಘಟನೆಯಿಂದ ಕೆಲಕಾಲ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಮಾಹಿತಿ ತಿಳಿದು ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲಾಯಿತು.