Home Karavali Karnataka ಉಡುಪಿ : ದೊಡ್ಡಣಗುಡ್ಡೆಯ ಬಾಳಿಗ ಆಸ್ಪತ್ರೆಯಲ್ಲಿ ಮದ್ಯವ್ಯಸನ ವಿಮುಕ್ತಿ ಶಿಬಿರ…!!

ಉಡುಪಿ : ದೊಡ್ಡಣಗುಡ್ಡೆಯ ಬಾಳಿಗ ಆಸ್ಪತ್ರೆಯಲ್ಲಿ ಮದ್ಯವ್ಯಸನ ವಿಮುಕ್ತಿ ಶಿಬಿರ…!!

ಉಡುಪಿ: ಉಡುಪಿಯ ದೊಡ್ಡಣಗುಡ್ಡೆಯ ಬಾಳಿಗ ಆಸ್ಪತ್ರೆಯಲ್ಲಿ ಮದ್ಯವ್ಯಸನ ವಿಮುಕ್ತಿ ಶಿಬಿರ ಆಯೋಜನೆಗೊಂಡಿದೆ. ಕಳೆದ ಹಲವು ವರ್ಷಗಳಿಂದ ಜನವರಿ ಒಂದರಿಂದ ಹತ್ತರ ತನಕ ಈ ಶಿಬಿರವನ್ನು ಆಸ್ಪತ್ರೆ ಆಯೋಜಿಸುತ್ತಾ ಬಂದಿದ್ದು, ಮಾದರಿ ಶಿಬಿರವಾಗಿ ಜನ ಮೆಚ್ಚುಗೆ ಪಡೆದಿದೆ. ಇವತ್ತಿನ ಶಿಬಿರದಲ್ಲಿ ಸುಮಾರು ಮೂವತ್ತಮೂರಕ್ಕೂ ಹೆಚ್ಚು ಜನರು ಮಧ್ಯ ತೊರೆಯುವ ಪ್ರತಿಜ್ಞೆಯೊಂದಿಗೆ ಶಿಬಿರಕ್ಕೆ ಸೇರ್ಪಡೆಗೊಂಡಿದ್ದಾರೆ.

ಶಿಬಿರದ ಉದ್ಘಾಟನೆಯು ಇಂದು ನೆರವೇರಿತು. ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ ಭಂಡಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ವಿಶು ಶೆಟ್ಟಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಮಧ್ಯದ ಅಮಲಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಕಿರು ನಾಟಕವನ್ನು ಪ್ರಸ್ತುತಪಡಿಸಲಾಯಿತು.

ಬಳಿಕ ಹಿಂದಿನ ಶಿಬಿರದಲ್ಲಿ ಚಿಕಿತ್ಸೆ ಪಡೆದು 5 ವರ್ಷಕ್ಕಿಂತ ಹೆಚ್ಚಿನ ಸಮಯ ಮದ್ಯ ಮುಕ್ತ ಜೀವನವನ್ನು ನಡೆಸಿದ 6 ಜನರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.

ಜನವರಿ ಹತ್ತರವರೆಗೆ ನಡೆಯುವ ಈ ಶಿಬಿರದಲ್ಲಿ ತಜ್ಞ ವೈದ್ಯರುಗಳು ಮಾದಕ ವ್ಯಸನಿಗಳನ್ನು ಬೇರೆ ಬೇರೆ ರೀತಿಯಲ್ಲಿ ಕೌನ್ಸೆಲಿಂಗ್ ಮಾಡಿ, ಮನರಂಜನೆ ಒದಗಿಸಿ ಅವರನ್ನು ಕುಡಿತದ ಚಟದಿಂದ ದೂರ ಮಾಡುವ ಪ್ರಯತ್ನ ಮಾಡಲಿದ್ದಾರೆ. ಈತನಕ ಇಂತಹ ಸುಮಾರು 34 ಶಿಬಿರಗಳು ನಡೆದಿದ್ದು, ಸಾಕಷ್ಟು ಜನ ಕುಡಿತದ ಚಟವನ್ನು ತೊರೆದಿದ್ದಾರೆ. ಈ ವರ್ಷದ ಶಿಬಿರದಲ್ಲಿ 33 ಜನ ದಾಖಲಾಗಿದ್ದು ಹೊಸ ಪ್ರತಿಜ್ಞೆಯೊಂದಿಗೆ ಹೊಸ ಜೀವನ ನಡೆಸಲು ಸಜ್ಜಾಗಿದ್ದಾರೆ.