ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಶಿರ್ವದಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ.
ಆಗಸ್ಟ್ 7ರಂದು ಸಂಜೆ ಸುಮಾರು 7 ಗಂಟೆಗೆ ಶಶಿಕಾಂತ್ ಎಂಬವರು ಶಿರ್ವ ಪೇಟೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗೆ ಪೆಟ್ರೋಲ್ ತುಂಬಿಸಿಕೊಂಡು ಹೊರಬರುತ್ತಿದ್ದ ವೇಳೆ, ಮಂಡೆಬೈಲು ನಿವಾಸಿ 55 ವರ್ಷದ ಪ್ರಕಾಶ್ ಆಚಾರ್ಯ ಅವರು KA-20-HE-1460 ನೋಂದಣಿ ಸಂಖ್ಯೆಯ ಸ್ಕೂಟರ್‌ನಲ್ಲಿ ಬೆಳ್ಮಣ್–ಶಿರ್ವ ರಸ್ತೆಯನ್ನು ದಾಟಿ ಬೆಳ್ಮಣ್ ಕಡೆಗೆ ತೆರಳುತ್ತಿದ್ದರು.
ಈ ವೇಳೆ ಬೆಳ್ಮಣ್ ಕಡೆಯಿಂದ ಶಿರ್ವ ಕಡೆಗೆ KA-20-Z-2883 ನೋಂದಣಿ ಸಂಖ್ಯೆಯ ಕಾರನ್ನು ಚಾಲಕ ಡೊಮಿನಿಕ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್‌ನ ಮುಂಭಾಗ ಮತ್ತು ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ರಭಸಕ್ಕೆ ಪ್ರಕಾಶ್ ಆಚಾರ್ಯ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ತಲೆ, ಕಿವಿ, ಕೈ-ಕಾಲು ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು.
ತಕ್ಷಣ ಅವರನ್ನು ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 7ರಂದು ರಾತ್ರಿ 8:02ಕ್ಕೆ ವೈದ್ಯರು ಪ್ರಕಾಶ್ ಆಚಾರ್ಯ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕಾರಿನ ಚಾಲಕ ಡೊಮಿನಿಕ್‌ನ ದುಡುಕುತನ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




