Home Crime ಕಟ್ಟಡ ಕಾಮಗಾರಿ ಸ್ಥಳದಲ್ಲಿದ್ದ ಬಾಲ ಕಾರ್ಮಿಕನ ರಕ್ಷಣೆ…!!

ಕಟ್ಟಡ ಕಾಮಗಾರಿ ಸ್ಥಳದಲ್ಲಿದ್ದ ಬಾಲ ಕಾರ್ಮಿಕನ ರಕ್ಷಣೆ…!!

ಕಾರ್ಕಳ : ಅಜೆಕಾರು ಗ್ರಾಮದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಬಾಲಕಾರ್ಮಿಕರು ದುಡಿಯುತ್ತಿದ್ದಾರೆ ಎಂಬ ಸಾರ್ವಜನಿಕ ದೂರಿನ ಅನ್ವಯ ಕಾರ್ಮಿಕ ಅಧಿಕಾರಿ ಅವರ ನಿರ್ದೇಶನದ ಮೇರೆಗೆ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಿ ಉತ್ತರ ಪ್ರದೇಶ ಮೂಲದ ಓರ್ವ ಬಾಲ ಕಾರ್ಮಿಕನನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿದರು.

ಕಟ್ಟಡದ ಮಾಲೀಕರು / ನಿಯೋಜಕರು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅಥವಾ ಇನ್ಯಾವುದೇ ಕೆಲಸದಲ್ಲಿ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳಬಾರದು. ಬೇರೆ ರಾಜ್ಯದಿಂದ ಕಾರ್ಮಿಕರನ್ನು ಕರೆ ತರುವಾಗ ಮೂಲ ದಾಖಲೆಯನ್ನು ಪರಿಶೀಲಿಸಿ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಹಾಗೂ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಮಾಲೀಕರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಕಳ ವೃತ್ತ ಕಾರ್ಮಿಕ ನಿರೀಕ್ಷಕ ನವೀನ್ ಸಿ. ಎಚ್. ತಿಳಿಸಿದ್ದಾರೆ.

ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕು ಹಾಗೂ ಅದನ್ನು ಪ್ರತಿ ಮಗು ದೊರಕಿಸುವುದು ಪ್ರತಿ ನಾಗರಿಕನ ಕರ್ತವ್ಯವಾಗಿರುತ್ತದೆ. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ 1986ರ ಅನ್ವಯ ಎಲ್ಲ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ಯಮಿಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ವಾರೆಂಟ್ ರಹಿತ ಬಂಧಿಸಬಹುದಾದ ಅಪರಾಧವಾಗಿದೆ ಎಂದು ಉಡುಪಿ ಉಪವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್ ಹೇಳಿದ್ದಾರೆ.

ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ಮಾಲೀಕರಿಗೆ ಆರು ತಿಂಗಳಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20,000 ದಿಂದ 50,000 ರೂ. ಗಳವರೆಗೆ ದಂಡ ಅಥವಾ ಎರಡನ್ನು ವಿಧಿಸುವ ಅವಕಾಶವಿರುತ್ತದೆ ಹಾಗೂ ಒಂದು ವರ್ಷದಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ ಅಲ್ಲದೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿಯನ್ನು ಪ್ರೋತ್ಸಾಹಿಸುವ ಪೋಷಕರಿಗೂ ಸಹ ಲಘು ಶಿಕ್ಷೆ ಪ್ರಾವಧಾನವಿದ್ದು, ಪುನರಾವರ್ತಿತ ಅಪರಾಧಕ್ಕೆ ರೂಪಾಯಿ 10,000 ರೂ. ಗಳ ದಂಡವನ್ನು ವಿಧಿಸಬಹುದಾಗಿದೆ.

ಕಾರ್ಯಾಚರಣೆಯಲ್ಲಿ ಕಾರ್ಕಳ ವೃತ್ತ ಕಾರ್ಮಿಕ ನಿರೀಕ್ಷಕ ನವೀನ್ ಸಿ.ಎಚ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕಿ ಅಮೃತ ಹಾಗೂ ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತೆ ನಯನ ಪಾಲ್ಗೊಂಡಿದ್ದರು.