ಮಂಗಳೂರು: ಸ್ಟೀಯರಿಂಗ್ ಗೇರ್ ದೋಷದಿಂದಾಗಿ ನಿಯಂತ್ರಣ ತಪ್ಪಿದ್ದ ದೋಣಿಯಲ್ಲಿ ಅಪಾಯಕ್ಕೆ ಸಿಲುಕಿದ್ದ 31 ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಗೋವಾ ಮೂಲದ ‘ಐಎಫ್‌ಬಿ ಸಂತ್ ಆಂಟನ್-ಐ’ ಎಂಬ ದೋಣಿಯು ತಾಂತ್ರಿಕ ದೋಷದಿಂದಾಗಿ ಮಂಗಳೂರಿನ ಕರಾವಳಿಯಿಂದ ಸುಮಾರು 100 ನಾಟಿಕಲ್ ಮೈಲು ದೂರದಲ್ಲಿ 11 ದಿನಗಳಿಂದ ದಿಕ್ಕಿಲ್ಲದೆ ತೇಲಾಡುತ್ತಿತ್ತು.
ದೋಣಿಯು ಸಮುದ್ರದಲ್ಲಿ ನಿಯಂತ್ರಣ ಕಳೆದುಕೊಂಡಿತ್ತು. ಪ್ರತಿಕೂಲ ಹವಾಮಾನ ಪರಿಸ್ಥಿತಿಯ ನಡುವೆಯೂ, ಐಸಿಜಿಎಸ್ ಕಸ್ತೂರ್ಬಾ ಗಾಂಧಿ ನೌಕೆ, ಕೊಚ್ಚಿಯಿಂದ ಕರಾವಳಿ ರಕ್ಷಣಾ ದಳದ ಡೊರ್ನಿಯರ್ ವಿಮಾನ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
“ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ, ಸಿಬ್ಬಂದಿಯ ಇರುವಿಕೆಯನ್ನು ಪತ್ತೆಹಚ್ಚಲು ಮತ್ತು ಅವರಿಗೆ ಸಹಾಯ ಮಾಡಲು ತಕ್ಷಣದ ಕ್ರಮ ಕೈಗೊಳ್ಳಲಾಯಿತು” ಎಂದು ಐಸಿಜಿ ವಕ್ತಾರರು ಮಾಹಿತಿ ನೀಡಿದ್ದಾರೆ.
ಅ. 25 ರಂದು, ಕೋಸ್ಟ್ ಗಾರ್ಡ್ ಸಿಬ್ಬಂದಿ ಸಂಕಷ್ಟದಲ್ಲಿದ್ದ ಮೀನುಗಾರಿಕಾ ದೋಣಿಯನ್ನು ತಲುಪಿದರು. ತಾಂತ್ರಿಕ ಮತ್ತು ಲಾಜಿಸ್ಟಿಕ್ ನೆರವು ಒದಗಿಸಿ, ಸಮುದ್ರದಲ್ಲಿಯೇ ಸ್ಟೀರಿಂಗ್ ದೋಷವನ್ನು ಸರಿಪಡಿಸುವಲ್ಲಿ ಯಶಸ್ವಿಯಾದರು. ದುರಸ್ತಿ ಕಾರ್ಯ ಪೂರ್ಣಗೊಂಡ ನಂತರ, ದೋಣಿಯನ್ನು ಸುರಕ್ಷಿತವಾಗಿ ಹೊನ್ನಾವರ ಮೀನುಗಾರಿಕಾ ಬಂದರಿಗೆ ಎಳೆದು ತರುವಲ್ಲಿ ಯಶಸ್ವಿಯಾಗಿದ್ದಾರೆ.
“ಮೀನುಗಾರರು ದಣಿದಿದ್ದರೂ ಸುರಕ್ಷಿತವಾಗಿದ್ದರು. ನಮ್ಮ ತಂಡಗಳು ಅವರಿಗೆ ವೈದ್ಯಕೀಯ ನೆರವು ಮತ್ತು ಅಗತ್ಯ ಸಾಮಗ್ರಿಗಳನ್ನು ಒದಗಿಸಿದೆ” ಎಂದು ಅಧಿಕಾರಿಗಳು ತಿಳಿಸಿದರು.



