ಅಂಕೋಲಾ: ಕಾರ್ಯನಿರತ ಪತ್ರಕರ್ತರ ಧ್ವನಿ ಅಂಕೋಲಾ ಘಟಕದ ವತಿಯಿಂದ, ಸಂಘದ ಸದಸ್ಯರ ಮಕ್ಕಳಾದ ಸಾಧಕ ಯುವ ಪ್ರತಿಭೆಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ವಕೀಲ ವೃತ್ತಿಗೆ ಅರ್ಹತೆ ಪಡೆದ ಸ್ನೇಹಾ ವಿದ್ಯಾಧರ ಮೊರಬಾ ಹಾಗೂ ನೃತ್ಯ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ನಿಧಿ ನಾಗರಾಜ ಶೆಟ್ಟಿ ಅವರನ್ನು ಶ್ರೀ ವೆಂಕಟರಮಣ ದೇವಾಲಯದ ಹೊರಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗೌರವಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲ ಉಮೇಶ್ ನಾಯ್ಕ ಸನ್ಮಾನ ನೆರವೇರಿಸಿ ಮಾತನಾಡುತ್ತಾ, “ವಕೀಲರು ಮತ್ತು ಪತ್ರಕರ್ತರು ಸಮಾಜದ ಎರಡು ಕಣ್ಣುಗಳಂತವರು. ಪತ್ರಕರ್ತರು ತಮ್ಮ ವರದಿಗಳ ಮೂಲಕ ಸಮಾಜದ ಬೆಳವಣಿಗೆಯ ಕನ್ನಡಿ ಹಿಡಿದಂತೆ ಕೆಲಸ ಮಾಡುತ್ತಾರೆ. ಅವರು ತಮ್ಮದೇ ಕುಟುಂಬದ ಸಾಧನೆಗೆ ಪ್ರಸಾರ ನೀಡದೆ ಹಿಂದೆ ಸರಿಯುವುದು ಸಾಮಾನ್ಯ. ಆದರೆ ಅಂಕೋಲಾದ ಪತ್ರಕರ್ತರು ತಮ್ಮ ಮಕ್ಕಳ ವಿದ್ಯಾಭ್ಯಾಸ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಉತ್ತೇಜನ ನೀಡಿರುವುದು ಶ್ಲಾಘನೀಯ,” ಎಂದು ಅಭಿಪ್ರಾಯಪಟ್ಟರು.
ವಿಜಯಕುಮಾರ ವಾಯ್ ನಾಯ್ಕ ಅವರು ಮಾತನಾಡಿ, “ಸಮಾಜದ ವಿವಿಧ ವಿಷಯಗಳ ಬಗ್ಗೆ ಕಾಳಜಿ ವಹಿಸುವ ಪತ್ರಕರ್ತರ ಮನೆಮಂದಿಯಲ್ಲಿಯೂ ಪ್ರತಿಭೆ ಉಕ್ಕುತ್ತಿರುವುದು ಸಂತೋಷದ ವಿಚಾರ. ಅವರ ಸಾಧನೆಯೂ ಸಮಾಜದಿಂದ ಗುರುತಿಸಲ್ಪಡಬೇಕು,” ಎಂದರು.
ಘಟಕದ ಅಧ್ಯಕ್ಷ ಮಾರುತಿ ಹರಿಕಂತ್ರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, “ಪತ್ರಕರ್ತರು ಎಲ್ಲರ ಸಾಧನೆಗಳನ್ನು ಸಮಾಜಕ್ಕೆ ತಲುಪಿಸುತ್ತಾರೆ. ಆದರೆ ಅವರ ಮನೆಯಲ್ಲಿನ ಸಾಧಕರು ಬೆಳಕಿಗೆ ಬರುವ ಅವಕಾಶ ಕಡಿಮೆ. ಪತ್ರಕರ್ತರ ಮಕ್ಕಳು ಕಷ್ಟ ಪರಿಸ್ಥಿತಿಯಲ್ಲಿಯೂ ಉನ್ನತ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ,” ಎಂದರು.
ಸ್ನೇಹಾ ಮೊರಬಾ ಅವರು ಬೆಂಗಳೂರಿನಲ್ಲಿ ವಕೀಲ ವೃತ್ತಿಗೆ ತರಬೇತಿ ಪ್ರಾರಂಭಿಸಿದ್ದು, ನಿಧಿ ಶೆಟ್ಟಿ ಅವರು ರಾಷ್ಟ್ರಮಟ್ಟದ ಎರಡು ನೃತ್ಯ ಸ್ಪರ್ಧೆಗಳಲ್ಲಿ ತಂಡದೊಂದಿಗೆ ದ್ವಿತೀಯ ಸ್ಥಾನ ಪಡೆದು ಹೆಮ್ಮೆ ತಂದಿದ್ದಾರೆ. ಸತತ ಎರಡು ವರ್ಷ ರಾಷ್ಟ್ರಮಟ್ಟದ ಫೈನಲ್ ಹಂತ ತಲುಪಿ ಒಂದು ಬಾರಿ ಬೆಳ್ಳಿ ಪದಕ ಹಾಗೂ ಮತ್ತೊಮ್ಮೆ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತ ವಿಲಾಸ ನಾಯಕ, ಸಾಮಾಜಿಕ ಕಾರ್ಯಕರ್ತ ಮಹೇಶ್ ಗೌಡ (ಬಡಗೇರಿ), ಹಾಗೂ ಸದಸ್ಯರು ಕಿರಣ ಗಾಂವಕರ, ಸೂರಜ್ ನಾಯ್ಕ, ಪ್ರಿಯಾ ಶೆಟ್ಟಿ, ಸುಪ್ರಿಯಾ ನಾಯ್ಕ ಉಪಸ್ಥಿತರಿದ್ದರು.ಸನ್ಮಾನಿತ ಪತ್ರಕರ್ತರು ವಿದ್ಯಾಧರ ಮೊರಬಾ, ನಾಗರಾಜ ಶೆಟ್ಟಿ ಹಾಗೂ ಪ್ರಶಸ್ತಿ ಪಡೆದ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಸದಸ್ಯೆ ಸುಪ್ರಿಯಾ ನಾಯ್ಕ ವಂದಿಸಿದರು.
–



