ಮೈಸೂರು: ಭ್ರೂಣಲಿಂಗ ಪತ್ತೆ, ಹತ್ಯೆ ಕಾನೂನು ಬಾಹಿರ ಎಂದು ಕಾನೂನು ಇದ್ದರೂ ಸಹ ಮೈಸೂರಿನಲ್ಲಿ ಹೇಯ ಕೃತ್ಯ ಮುಂದುವರೆದಿದೆ. ಹೌದು, ಮೆಲ್ಲಹಳ್ಳಿ ಬಳಿಯ ಹುನಗನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಐಷಾರಾಮಿ ಬಂಗಲೆಯೊಂದರಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ ಜಾಲ ಪತ್ತೆ ಮಾಡಲಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹೆಣ್ಣು ಭ್ರೂಣ ಲಿಂಗ ಪತ್ತೆ ಹತ್ಯೆ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಪ್ರಕರಣ ಸಂಬಂಧ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಂ ಒಂದರ ಕೈವಾಡದ ಶಂಕೆ ವ್ಯಕ್ತವಾಗಿದೆ.
ಮೈಸೂರಿನಲ್ಲಿ ಮೆಲ್ಲಹಳ್ಳಿ ಬಳಿಯ ಹುನಗನಹಳ್ಳಿದ್ದ ಐಷಾರಾಮಿ ಬಂಗಲೆಯನ್ನು ಆರೋಪಿಗಳು ತಮ್ಮ ಅಕ್ರಮ ಚಟುವಟಿಕೆಗಳ ಕೇಂದ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಗರ್ಭಿಣಿ ಮಹಿಳೆಯರನ್ನು ಕರೆತಂದು, ಅವರ ಗರ್ಭದಲ್ಲಿರುವ ಭ್ರೂಣ ಯಾವುದು ಎಂದು ಪತ್ತೆ ಹಚ್ಚಲಾಗುತ್ತಿತ್ತು. ನಂತರ ಗಂಡು ಲಿಂಗ ಪತ್ತೆ ಮಾಡಿದರೆ, 25,000 ರೂಪಾಯಿ ವಸೂಲಿ ಮಾಡುತ್ತಿದ್ದರು. ಹೆಣ್ಣು ಭ್ರೂಣವಾದರೆ ಅದರ ಹತ್ಯೆಗೆ 30,000 ರೂಪಾಯಿ ವಸೂಲಿ ಮಾಡುತ್ತಿದ್ದರು ಎಂಬುದು ಮಾಹಿತಿ ತಿಳಿದು ಬಂದಿದೆ.
ಭ್ರೂಣ ಹತ್ಯೆ ದಂಧೆಯ ಮೂಲಕ ಲಕ್ಷಾಂತರ ರೂಪಾಯಿ ವಹಿವಾಟು ನಡೆಸಿದ್ದಾರೆ ಎಂಬುದಕ್ಕೆ ಸಾಕ್ಷಿ ಮನೆಯಲ್ಲಿ ಸಿಕ್ಕ ಡೈರಿಯಾಗಿದೆ. ಕೊಠಡಿಯಲ್ಲಿದ್ದ ಕಬ್ಬಿಣದ ಲಾಕರ್‌ನಲ್ಲಿ 3 ಲಕ್ಷಕ್ಕೂ ಅಧಿಕ ನಗದು ಪತ್ತೆಯಾಗಿದೆ. ಅಲ್ಲದೆ, ಭ್ರೂಣ ಹತ್ಯೆಗೆ ಬೇಕಾದ ಕಿಟ್‌ಗಳು ಮತ್ತು ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ.



