ಸಾಲಿಗ್ರಾಮ: ಸಾಮಾಜಿಕ ಕಾರ್ಯಕರ್ತ, ರಾಜಕೀಯ ಮುಖಂಡ, ನಾಗೇಂದ್ರ ಪುತ್ರನ್ ಅವರು ಮಾಲೀಕತ್ವದಲ್ಲಿ ಗ್ರಾಮೀಣ ಭಾಗದ ಬಡ ಫಲಾನುಭವಿಗಳಿಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳು, ಕಾನೂನು ಮಾಹಿತಿ ಮೊದಲಾದ ಸೇವೆಗಳನ್ನು ನೀಡುವ ಶ್ರೀ ಸಾಯಿ ಜನಸ್ನೇಹೀ ಸೇವಾ ಕೇಂದ್ರ ಬುಧವಾರ ಸಾಲಿಗ್ರಾಮದಲ್ಲಿ ಲೋಕಾರ್ಪಣೆಗೊಂಡಿತು.
ಆರಂಭದಲ್ಲಿ ಗೋಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು.
ಬಳಿಕ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ. ಎ. ಗಫೂರ್ ನೂತನ ಕಚೇರಿಯನ್ನು ಉದ್ಘಾಟಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡ ಪ್ರಸಾದ್ ರಾಜ್ ಕಾಂಚನ್ ದೀಪ ಬೆಳಗಿಸಿದರು.
ಎಂ.ಎ. ಗಫೂರ್ ಅವರನ್ನು ಕಾಂಗ್ರೆಸ್ ನಾಯಕ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಗಫೂರ್, ಗ್ರಾಮೀಣ ಭಾಗದ ಜನರಿಗೆ ಅನುಕೂಲ ಕಲ್ಪಿಸುವಲ್ಲಿ ನಾಗೇಂದ್ರ ಪುತ್ರನ್ ನೇತೃತ್ವದ ಶ್ರೀ ಸಾಯಿ ಜನಸ್ನೇಹಿ ಸೇವಾ ಕೇಂದ್ರ ದಾರಿದೀಪವಾಗಲಿ. ಸರ್ಕಾರದ ಸೌಲಭ್ಯಗಳು ಜನಸಾಮಾನ್ಯರಿಗೆ ಸುಲಭವಾಗಿ ಸಿಗುವಂತಾಗಲಿ ಎಂದು ಹಾರೈಸಿದರು. ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ನಾಗೇಂದ್ರ ಪುತ್ರನ್ ಯುವ ನಾಯಕನಾಗಿ ಹೊರಹೊಮ್ಮುತ್ತಿದ್ದು, ಸಾಮಾಜಿಕ ಕಳಕಳಿಯೊಂದಿಗೆ ಆರಂಭಿಸಿದ ಸೇವಾಕೇಂದ್ರ ಯಶಸ್ಸು ಕಾಣಲಿ ಎಂದರು.
ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಯುವಕರು ರಾಜಕೀಯವಾಗಿ ಮುಂದೆ ಬಂದಾಗ ಪಕ್ಷ ಸಂಘಟನೆ ಸಾಧ್ಯ. ಆ ನಿಟ್ಟಿನಲ್ಲಿ ನಾಗೇಂದ್ರ ಪುತ್ರನ್ ಸಾಲಿಗ್ರಾಮದಲ್ಲಿ ಆರಂಭಿಸಿದ ಸೇವಾಕೇಂದ್ರ ಜನಸ್ನೇಹಿಯಾಗಿ ಜನಮನ್ನಣೆ ಗಳಿಸಲಿ ಎಂದು ಹಾರೈಸಿದರು.
ಗೋಪಾಲ ಬಂಗೇರ ಸ್ವಾಗತಿಸಿದರು. ಕೃಷ್ಣ ಪೂಜಾರಿ, ರಾಜ್ಯ ಕಾಂಗ್ರೆಸ್ ಐಟಿ ಸೆಲ್ ನ ಚಂದ್ರಶೇಖರ್ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ ರೋಷನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.










