ಕಾಪು: ಇಲ್ಲಿನ ದಂಡತೀರ್ಥ ಶಾಲೆಯ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕೂಟಿಯೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಮೃತ ಯುವಕನನ್ನು ಉಡುಪಿ ಕಲ್ಯಾಣಪುರದ ಅನುಷ್ ಕರುಣಾಕರ ಭಂಡಾರಿ ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ 10.45ರ ಸುಮಾರಿಗೆ ಉಡುಪಿ ಕಡೆ ಹೋಗುತ್ತಿದ್ದ ವೇಳೆ ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ಮೃತನ ದೇಹ ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಚ್ಚಿಲದ ಸಾಮಾಜಿಕ ಕಾರ್ಯಕರ್ತ ಜಲಾಲುದ್ದೀನ್ ಉಚ್ಚಿಲ ಮತ್ತು ಅವರ ತಂಡದ ಸದಸ್ಯರು ಚೆಲ್ಲಾಪಿಲ್ಲಿಯಾದ ಮೃತದೇಹವನ್ನು ಎತ್ತಿ ಹಾಕಿ ಮೂಳೂರಿನ ಎಸ್ ಡಿ ಪಿಐ ಅಂಬ್ಯುಲೆನ್ಸ್ ಮೂಲಕ ಅಜ್ಜರಕಾಡು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲು ನೇರವಾದರು.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
