Home Crime ಮುಂಬಯಿ : ಬಹುಮಹಡಿ ವಸತಿ ಕಟ್ಟದಲ್ಲಿ ಬೆಂಕಿ : ನಾಲ್ವರು ಸಾವು : ಹತ್ತು ಮಂದಿ...

ಮುಂಬಯಿ : ಬಹುಮಹಡಿ ವಸತಿ ಕಟ್ಟದಲ್ಲಿ ಬೆಂಕಿ : ನಾಲ್ವರು ಸಾವು : ಹತ್ತು ಮಂದಿ ಗಾಯ…!!

ಮುಂಬೈ: ಮಹಾರಾಷ್ಟ್ರದ ನವಿ ಮುಂಬೈ ಟೌನ್‌ಶಿಪ್‌ನಲ್ಲಿರುವ ಬಹುಮಹಡಿ ವಸತಿ ಕಟ್ಟಡದಲ್ಲಿ ಸೋಮವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಅದರಲ್ಲಿ 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಶಿ ಪ್ರದೇಶದ ಸೆಕ್ಟರ್ 14ರಲ್ಲಿರುವ ರಹೇಜಾ ರೆಸಿಡೆನ್ಸಿಯ ಎಂಜಿಎಂ ಕಾಂಪ್ಲೆಕ್ಸ್‌ನ 10ನೇ ಫ್ಲೋರ್‌ನಲ್ಲಿರುವ ಫ್ಲಾಟ್‌ನಲ್ಲಿ ಸೋಮವಾರ ಮಧ್ಯರಾತ್ರಿ 12:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ 11 ಮತ್ತು 12ನೇ ಮಹಡಿಗೂ ಹರಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೆಂಕಿ ಅವಘಡದಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು 6 ವರ್ಷದ ಬಾಲಕಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವಾಶಿಯ ಎರಡು ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

ಬೆಂಕಿ ಅವಘಡದ ಕುರಿತು ಮಾಹಿತಿ ದೊರೆಯುತ್ತಿದ್ದಂತೆ 40 ಅಗ್ನಿಶಾಮಕ ದಳದ ಸಿಬ್ಬಂದಿ, 8 ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಮಂಗಳವಾರ ಬೆಳಗ್ಗೆ 4 ಗಂಟೆಯ ಸುಮಾರಿಗೆ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಅಗ್ನಿ ಅವಘಡಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕು.