ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಕಸಾಲಿಗರ ಕೇರಿಯ ರಸ್ತೆಯ ಪ್ರಧಾನ ಅಂಚೆ ಕಚೇರಿಯ ಬಳಿಯಿಂದ ಶ್ರೀ ವೀರ ಮಾರುತಿ ದೇವಸ್ಥಾನಕ್ಕೆ ಹೋಗುವ ಒಳ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಬೈಕ್ ನಲ್ಲಿ ಬಂದ ಯುವಕನೊಬ್ಬ ಸುಮಾರು ಮೂರು ಲಕ್ಷ ಬೆಲೆಬಾಳುವ ಎರಡು ಪವನ್ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ.
ಈ ಸಂದರ್ಭದಲ್ಲಿ ಮಹಿಳೆ, ಅಂಚೆ ಕಚೇರಿ ಬಳಿಯ ನಿವಾಸಿ ನಳಿನಿ ಎ ನಾಯಕ್ (74) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಳೆ ನಳಿನಿ ನಾಯಕ್ ಎಂದಿನಂತೆ ಮಧ್ಯಾಹ್ನ ಊಟದ ಬಳಿಕ ವಾಕಿಂಗ್ ಹೋಗಲು ಸಿದ್ಧತೆ ನಡೆಸಿ ಗೇಟಿನ ಬಳಿ ಹೋದಾಗ ಮುಲ್ಕಿ ಕಡೆಯಿಂದ ಬಂದ ಬೈಕ್ ನಲ್ಲಿ ಬಂದ ಯುವಕ, ನಳಿನಿ ರವರ ಗೆಟ್ ಬಳಿ ಬೈಕ್ ನಿಲ್ಲಿಸಿ ನಾಗೇಶ್ ರಾವ್ ಅವರ ಮನೆ ಎಲ್ಲಿ ?ಎಂದು ಕೇಳಿದ್ದಾನೆ. ಆಗ ನಳಿನಿವ ರವರುಗೊತ್ತಿಲ್ಲ ಎಂದು ಹೇಳಿ ಬಳಿಕ ತಮ್ಮ ಮನೆಯ ಬಳಿಯ ವೀರ ಮಾರುತಿ ದೇವಸ್ಥಾನಕ್ಕೆ ಹೋಗುವ ಒಳ ರಸ್ತೆಯಲ್ಲಿ ವಾಕಿಂಗ್ ಹೋಗಿದ್ದಾರೆ.
ಇತ್ತ ಯುವಕ ಬೈಕ್ ನಲ್ಲಿ ನಳಿನಿ ರವರನ್ನು ಹಿಂಬಾಲಿಸಿಕೊಂಡು ಬಂದು ಅದೇ ರಸ್ತೆಯ ನೀರಿನ ಟ್ಯಾಂಕ್ ಬಳಿ ಅವರನ್ನು ನಿಲ್ಲಿಸಿ ಚಾಕು ತೋರಿಸಿ ಹೆದರಿಸಿದ್ದಾನೆ.ಆಗ ಮಹಿಳೆ ದೈರ್ಯದಿಂದ ತಮ್ಮ ಬಳಿ ಇರುವ ಕೊಡೆಯಲ್ಲಿ ಆತನ ಕೈಗೆ ಹೊಡೆದಿದ್ದಾರೆ. ಆಗ ಯುವಕನು ನಳಿನಿರವರನ್ನು ತಳ್ಳಿದ್ದು ಅವರು ಕೆಳಗೆ ಬೀಳುವ ಹೊತ್ತಿನಲ್ಲಿ ಯುವಕ ಅವರ ಕುತ್ತಿಗೆಗೆ ಕೈ ಹಾಕಿ ಸರ. ಕಿತ್ತು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಸಂದರ್ಭ ನಳಿನಿ ರವರು ಗಾಯಗೊಂಡರೂ ಸಾವರಿಸಿಕೊಂಡು ಕೂಡಲೇ ಸ್ಥಳದಿಂದ ಮನೆಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮಹಿಳೆಯ ಸರ ಕಿತ್ತು ಪರಾರಿಯಾದ ಯುವಕ ಅದೇ ರಸ್ತೆಯಲ್ಲಿ ಬೈಕ್ ಮೂಲಕ ವೆಂಕಟರಮಣ ದೇವಸ್ಥಾನದ ದ್ವಾರದ ಬಳಿ ಎಡಕ್ಕೆ ಚಲಿಸಿ ವಿಜಯ ಕಾಲೇಜು ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ ಉಡುಪಿ ಕಡೆಗೆ ಪರಾರಿಯಾಗಿರುವ ಬಗ್ಗೆ ಸಿಸಿ ಕ್ಯಾಮೆರಾ ಮೂಲಕ ಪತ್ತೆಯಾಗಿದೆ.
ಮನೆಗೆ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್,ಸದಸ್ಯ ಸುಭಾಷ್ ಶೆಟ್ಟಿ ಭೇಟಿ ನೀಡಿದ್ದಾರೆ.
ಯಾರೋ ಗೊತ್ತಿದ್ದವರೇ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
