ಕೋಟ: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಹಂದಟ್ಟು ಎಂಬಲ್ಲಿ 75 ವರ್ಷದ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಮೃತರನ್ನು ಮಂಜುನಾಥ ಮೊಗವೀರ (75) ಎಂದು ಗುರುತಿಸಲಾಗಿದೆ. ಅವರ ಪುತ್ರ ಸುಭಾಶ್ಚಂದ್ರ (37), ಮನಸ್ವಿ ನಿವಾಸಿ, ಹಂದಟ್ಟು, ಕೋಟತಟ್ಟು ಗ್ರಾಮ ಇವರು ನೀಡಿದ ದೂರಿನ ಪ್ರಕಾರ, ಮಂಜುನಾಥ ಮೊಗವೀರ ಅವರು ಬಹಳ ಸಮಯದಿಂದ ವಿಪರೀತ ಮದ್ಯಪಾನದ ಚಟ ಹೊಂದಿದ್ದು, ಇದರಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಉಡುಪಿಯ ಹೈಟೆಕ್ ಆಸ್ಪತ್ರೆ ಹಾಗೂ ಕನ್ನುಕರೆಯ ವೈದ್ಯಾಧಿಕಾರಿಗಳಲ್ಲಿ ಚಿಕಿತ್ಸೆ ಪಡೆಯಲಾಗಿತ್ತು.
ಚಿಕಿತ್ಸೆಯ ವೇಳೆ ವೈದ್ಯರು ಮಂಜುನಾಥ ಮೊಗವೀರ ಅವರಿಗೆ ಕ್ಯಾನ್ಸರ್ ಕಾಯಿಲೆ ಇರುವುದಾಗಿ ತಿಳಿಸಿದ್ದರು. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಅವರು, ಜೂನ್ 12ರಂದು ರಾತ್ರಿ 9 ಗಂಟೆಯಿಂದ ಜೂನ್ 13ರಂದು ಬೆಳಿಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ನಿವಾಸದ ಸಮೀಪದ ತೋಟದಲ್ಲಿದ್ದ ಬಾದಾಮಿ ಮರಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ಸಂಖ್ಯೆ 23/2026ರಡಿ ಕಲಂ 194 ಬಿ.ಎನ್.ಎಸ್.ಎಸ್. ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.




