Home Crime ಟೆಂಪೋ ಹಿಂಬಾಲಿಸಿ ಹಲ್ಲೆ – ಬ್ಯಾಟ್‌ನಿಂದ ಗಾಜು ಒಡೆದು ಜೀವ ಬೆದರಿಕೆ : ಪ್ರಕರಣ ದಾಖಲು…!!

ಟೆಂಪೋ ಹಿಂಬಾಲಿಸಿ ಹಲ್ಲೆ – ಬ್ಯಾಟ್‌ನಿಂದ ಗಾಜು ಒಡೆದು ಜೀವ ಬೆದರಿಕೆ : ಪ್ರಕರಣ ದಾಖಲು…!!

ಕಾರ್ಕಳ: ನಿಟ್ಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಟೆಂಪೋವನ್ನು ಕಾರಿನಲ್ಲಿ ಹಿಂಬಾಲಿಸಿ, ವಾಹನಕ್ಕೆ ಡಿಕ್ಕಿ ಹೊಡೆದು ಬ್ಯಾಟ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿರ್ಯಾದಿದಾರರಾದ ನಿಟ್ಟೆ ಗ್ರಾಮದ ನಿವಾಸಿ ಮೊಹಮ್ಮದ್ ಶಬೀಬ್ (24) ಅವರು ತಮ್ಮ ತಮ್ಮ ಅಬ್ದುಲ್ ಮಲಿಕ್ ಅವರೊಂದಿಗೆ ದಿನಾಂಕ 12/06/2026ರಂದು ಟೆಂಪೋ KA-20 AD-1172ರಲ್ಲಿ ನಿಟ್ಟೆಯಿಂದ ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ಆರೋಪಿತ ಮಹಮ್ಮದ್ ಹುನೈಸ್ ಎಂಬಾತನು ಅನೀಸ್ ಮತ್ತು ಶಿಯಾನ್ ಎಂಬವರೊಂದಿಗೆ KA-36 M-9449 ಸಂಖ್ಯೆಯ ಕಾರಿನಲ್ಲಿ ಟೆಂಪೋವನ್ನು ಹಿಂಬಾಲಿಸಿಕೊಂಡು ಬಂದು ಬ್ಯಾಟ್ ತೋರಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಇದರಿಂದ ಭಯಗೊಂಡ ಪಿರ್ಯಾದಿದಾರರು ತಮ್ಮ ವಾಹನವನ್ನು ವಾಪಸ್ ತಿರುಗಿಸಿಕೊಂಡು ಮನೆ ಕಡೆಗೆ ತೆರಳುತ್ತಿದ್ದ ವೇಳೆ, ಬೆಳಿಗ್ಗೆ ಸುಮಾರು 7.45 ಗಂಟೆಗೆ ನಿಟ್ಟೆ ಗ್ರಾಮದ ದೂಪದಕಟ್ಟೆ ಸಮೀಪ, ಆರೋಪಿತರು ಕಾರನ್ನು ಟೆಂಪೋಗೆ ಡಿಕ್ಕಿ ಹೊಡೆದು ವಾಹನವನ್ನು ನಿಲ್ಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಕಾರಿನಿಂದ ಇಳಿದ ಆರೋಪಿತರು ಟೆಂಪೋದ ಗಾಜನ್ನು ಬ್ಯಾಟ್‌ನಿಂದ ಒಡೆದು, ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬ್ಯಾಟ್‌ನಿಂದ ಹಲ್ಲೆ ನಡೆಸಿ, ಎಳೆದು ಕಾಲಿನಿಂದ ತುಳಿದು, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 50/2026 ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.