ಉಡುಪಿ: ತಾವು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳು ಸಂಪೂರ್ಣ ಆಧಾರರಹಿತವಾಗಿದ್ದು, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಧಿಕಾರ ಅಥವಾ ಹುದ್ದೆಗಳಿಗಾಗಿ ತಾವು ರಾಜಕೀಯಕ್ಕೆ ಬಂದವರಲ್ಲ ಎಂದು ಹೇಳಿದ್ದಾರೆ. “ನಾನು ಭಾರತೀಯ ಜನತಾ ಪಕ್ಷವನ್ನು ಅಧಿಕಾರದ ಆಸೆಯಿಂದ ಸೇರಿಲ್ಲ. ಜನಸೇವೆಯ ಉದ್ದೇಶದಿಂದ ಪಕ್ಷದೊಂದಿಗೆ ಕೈಜೋಡಿಸಿದ್ದೇನೆ. ಅಧಿಕಾರ ಅಥವಾ ಹುದ್ದೆಗಳು ಬಂದರೆ ಅದು ಹೆಚ್ಚುವರಿ ಜವಾಬ್ದಾರಿಯಷ್ಟೇ. ನನ್ನ ರಾಜಕೀಯ ಬದುಕಿನ ಮೂಲ ಗುರಿ ಜನರ ಸೇವೆ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಯಾಗಿದೆ” ಎಂದು ತಿಳಿಸಿದ್ದಾರೆ.
“ಹುದ್ದೆಗಳು ವ್ಯಕ್ತಿಯನ್ನು ದೊಡ್ಡವನನ್ನಾಗಿಸುವುದಿಲ್ಲ. ಜನರ ವಿಶ್ವಾಸ, ಪ್ರೀತಿ ಮತ್ತು ಸೇವಾಭಾವನೆಯೇ ವ್ಯಕ್ತಿಯ ನಿಜವಾದ ಶಕ್ತಿಯಾಗಿದೆ. ನನಗೆ ಯಾವುದೇ ಅಧಿಕಾರ ಸಿಕ್ಕರೆ ಅದು ಜನರ ಸಮಸ್ಯೆಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸ್ಪಂದಿಸಲು ನೆರವಾಗುತ್ತದೆ. ಅಧಿಕಾರ ಎಂದರೆ ಗೌರವದ ಸಂಕೇತವಲ್ಲ, ಜವಾಬ್ದಾರಿಯ ಪ್ರತೀಕ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷ ಯಾವುದೇ ಜವಾಬ್ದಾರಿಯನ್ನು ನೀಡಿದರೆ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ. ಜವಾಬ್ದಾರಿ ಸಿಗದಿದ್ದರೂ ಸಾಮಾನ್ಯ ಕಾರ್ಯಕರ್ತನಾಗಿ ಜನರ ಮಧ್ಯೆಯೇ ಕೆಲಸ ಮಾಡುವುದನ್ನು ಮುಂದುವರಿಸುವೆ ಎಂದು ಅವರು ಹೇಳಿದ್ದಾರೆ.
ತಮ್ಮ ಕಾರ್ಯ, ಪಕ್ಷದ ಮೇಲಿನ ನಿಷ್ಠೆ ಹಾಗೂ ಜನಸೇವೆಯ ಬದ್ಧತೆಯನ್ನು ಪಕ್ಷದ ನಾಯಕತ್ವ ಗುರುತಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಅವರು, ತಮ್ಮ ರಾಜಕೀಯ ಪಯಣದಲ್ಲಿ ಬೆಂಬಲ ನೀಡುತ್ತಿರುವ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
“ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ನನ್ನ ಶಕ್ತಿ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ. ಅಧಿಕೃತ ಮಾಹಿತಿಯನ್ನಷ್ಟೇ ನಂಬಿ,” ಎಂದು ಮನವಿ ಮಾಡಿದ ಅವರು, “ಅಧಿಕಾರ ನನ್ನ ಗುರಿಯಲ್ಲ, ಜನಸೇವೆಯೇ ನನ್ನ ಧ್ಯೇಯ. ಅಧಿಕಾರ ಸಿಕ್ಕರೂ ಜನಸೇವೆ, ಸಿಗದಿದ್ದರೂ ಜನಸೇವೆಯೇ ನನ್ನ ಪಥ” ಎಂದು ಪುನರುಚ್ಚರಿಸಿದರು.




