Home Crime ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್‌ಗೆ ವಂಚನೆ : ₹3.49 ಲಕ್ಷ ಸಾಲ ಪಡೆದ ಆರೋಪ…!!

ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್‌ಗೆ ವಂಚನೆ : ₹3.49 ಲಕ್ಷ ಸಾಲ ಪಡೆದ ಆರೋಪ…!!

ಸಾಂದರ್ಭಿಕ ಚಿತ್ರ

ಪಡುಬಿದ್ರಿ: ಕಾಪು ತಾಲೂಕಿನ ನಡ್ಸಾಲು ಗ್ರಾಮದ ಆಕ್ಸಿಸ್ ಬ್ಯಾಂಕ್ ಲಿಮಿಟೆಡ್   ಪಡುಬಿದ್ರಿ ಶಾಖೆಯಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ₹3.49 ಲಕ್ಷ ಸಾಲ ಪಡೆದು ಬ್ಯಾಂಕ್‌ಗೆ ವಂಚನೆ ಎಸಗಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ಪಿರ್ಯಾದಿದಾರರಾದ ಪ್ರದೀಪ್ ಕುಮಾರ್ (31) ಅವರು ಬ್ಯಾಂಕ್‌ನ ಶಾಖಾ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಆರೋಪಿ ರಾಜೀವ್ ಕಲಾಯತಿನಲ್ಕುಜಿಯಿಲ್ ಕುಟ್ಟಪ್ಪನ್ ಎಂಬಾತನು 21/09/2022ರಂದು LNAPG ಯೋಜನೆಯಡಿ ಜೆ.ಎಲ್ ಖಾತೆಯಲ್ಲಿ 103.750 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಡವಿಟ್ಟು ₹3,49,000 ಸಾಲ ಪಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಯು ಇತರ ಬ್ಯಾಂಕ್‌ಗಳಲ್ಲಿಯೂ ನಕಲಿ ಆಭರಣಗಳನ್ನು ಇಟ್ಟು ಸಾಲ ಪಡೆದಿರುವ ಕುರಿತು ಪ್ರಕರಣಗಳು ದಾಖಲಾಗಿರುವ ಹಿನ್ನಲೆಯಲ್ಲಿ ಅನುಮಾನಗೊಂಡ ಬ್ಯಾಂಕ್ ಅಧಿಕಾರಿಗಳು, ಆತ ಅಡವಿಟ್ಟಿದ್ದ ಚಿನ್ನಾಭರಣಗಳನ್ನು ಮರು ಪರಿಶೀಲನೆಗೆ ಒಳಪಡಿಸಿದ್ದರು. ಮೆಜರ್ಸ್ ಸುಮೇರು ಗ್ಲೋಬಲ್ ಸಪೋರ್ಟ್ ಸೊಲುಷನ್ ಪ್ರೈವೇಟ್ ಲಿಮಿಟೆಡ್‌ನ ಎಂಪನೇಲ್ಡ್ ಪರೀಕ್ಷಕರವರು 03/12/2025ರಂದು ನಡೆಸಿದ ಪರಿಶೀಲನೆಯಲ್ಲಿ ಆಭರಣಗಳು ನಕಲಿ ಎಂದು ವರದಿಯಲ್ಲಿ ದೃಢಪಟ್ಟಿದೆ.

ಆರೋಪಿಯು ನಕಲಿ ಬಂಗಾರದ ಒಡವೆಗಳನ್ನು ಅಸಲಿ ಎಂದು ನಂಬಿಸಿ, ಸಾರ್ವಜನಿಕರ ಠೇವಣಿಯಿಂದ ಕಾರ್ಯನಿರ್ವಹಿಸುವ ಬ್ಯಾಂಕ್‌ನಿಂದ ಸಾಲ ಪಡೆದು ವಂಚನೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಬ್ಯಾಂಕ್‌ನ ಮೇಲಾಧಿಕಾರಿಗಳ ಅನುಮತಿ ಪಡೆದು ಮರು ಮೌಲ್ಯಮಾಪನ ವರದಿಯೊಂದಿಗೆ ದೂರು ದಾಖಲಿಸಲಾಗಿದೆ.

ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.