ಉಡುಪಿ, ಜೂ.12: ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಯುದ್ಧ ಭೀತಿ, ಮಾನವೀಯ ಸಂಬಂಧಗಳಲ್ಲಿ ಉಂಟಾಗುತ್ತಿರುವ ಬಿರುಕು ಹಾಗೂ ಪ್ರಕೃತಿಯ ಮೇಲಿನ ದಬ್ಬಾಳಿಕೆಯ ವಿರುದ್ಧ ವಿಶ್ವಶಾಂತಿ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಉದ್ದೇಶದಿಂದ ಸಾಮಾಜಿಕ ಹೋರಾಟಗಾರ ರಾಮಾಂಜಿ ನಮ್ಮಭೂಮಿ ಅವರು ಜೂನ್ 13ರಂದು ಮಣಿಪಾಲದಲ್ಲಿ ಮೌನ ಜಾಗೃತಿ ಚಳುವಳಿ ನಡೆಸಲಿದ್ದಾರೆ.
ಕುಂದಾಪುರದ ಅಂತಾರಾಷ್ಟ್ರೀಯ ದುಡಿಯುವ ಮಕ್ಕಳ ಸಂಸ್ಥೆ ‘ನಮ್ಮ ಭೂಮಿ’ ಮೂಲಕ ಸಾಮಾಜಿಕ ಕಳಕಳಿಯೊಂದಿಗೆ ಬೆಳೆದು ಬಂದಿರುವ ರಾಮಾಂಜಿ ಅವರು, ಮಕ್ಕಳ ಹಕ್ಕುಗಳ ಹೋರಾಟಗಾರ, ರಂಗಕರ್ಮಿ ಹಾಗೂ ಉಪನ್ಯಾಸಕರಾಗಿ ಹಲವು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಐದು ತಿಂಗಳಿನಿಂದ ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧ ಸಂಬಂಧಿ ಬೆಳವಣಿಗೆಗಳು ಮತ್ತು ಮಾನವ ಜನಾಂಗದ ಮೇಲಿನ ಹಿಂಸಾಚಾರಗಳಿಂದ ಮನನೊಂದ ಅವರು, ಅಹಿಂಸೆಯ ಮೂಲಕ ನೈತಿಕ ಪ್ರತಿಭಟನೆ ವ್ಯಕ್ತಪಡಿಸುವ ನಿರ್ಧಾರ ಕೈಗೊಂಡಿದ್ದಾರೆ.
ಈ ಹಿಂದೆಯೂ ಏಪ್ರಿಲ್ 11ರಂದು ಉಡುಪಿಯಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವದ ಮಾದರಿಯಲ್ಲಿ ಒಂದು ದಿನದ ಮೌನ ಪ್ರತಿಭಟನಾ ಚಳುವಳಿ ನಡೆಸಿದ್ದು, ಮಾಧ್ಯಮಗಳ ಸಹಕಾರದಿಂದ ಉತ್ತಮ ಸ್ಪಂದನೆ ದೊರೆತಿತ್ತು. ಇದೇ ಚಳುವಳಿಯನ್ನು ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸುವ ಮೂಲಕ ಜಗತ್ತಿನ ಸಾಮ್ರಾಜ್ಯಶಾಹಿ, ಅಧಿಕಾರದಾಹಿ ಮತ್ತು ಸರ್ವಾಧಿಕಾರಿ ಮನೋಭಾವಗಳಿಗೆ ಮಾನವೀಯ ಸಂದೇಶ ರವಾನಿಸುವ ಪ್ರಯತ್ನವನ್ನು ಅವರು ಮುಂದುವರಿಸುತ್ತಿದ್ದಾರೆ.
ಅದರ ಭಾಗವಾಗಿ ಜೂನ್ 13ರಂದು ಬೆಳಿಗ್ಗೆ 8.30ರಿಂದ ಸಂಜೆ 6.30ರವರೆಗೆ ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ನಾಲ್ಕನೇ ಹಂತದ ಜಾಗೃತಿ ಮೌನ ಚಳುವಳಿ ನಡೆಯಲಿದೆ. ಕಾರ್ಯಕ್ರಮದ ಆರಂಭದಲ್ಲಿ ಮಣಿಪಾಲದ ಶಿಲ್ಪಿ ಡಾ. ಟಿ.ಎಂ.ಎ. ಪೈ ಅವರ ಪುತ್ಥಳಿಗೆ ಪುಷ್ಪಾರ್ಪಣೆ ಮಾಡಿ, ಯುದ್ಧಗಳಲ್ಲಿ ಪ್ರಾಣ ಕಳೆದುಕೊಂಡವರಿಗೆ ಮೌನ ನಮನ ಸಲ್ಲಿಸಿ ಚಳುವಳಿಗೆ ಚಾಲನೆ ನೀಡಲಾಗುವುದು.
ಜಾಗತಿಕ ಮಟ್ಟದಲ್ಲಿ ಶಾಂತಿ, ಸೌಹಾರ್ದತೆ, ಪರಸ್ಪರ ಹೊಂದಾಣಿಕೆ, ಮಾನವ ಪ್ರೀತಿ, ಪರಿಸರ ಕಾಳಜಿ ಹಾಗೂ ಮಕ್ಕಳ ಭವಿಷ್ಯಕ್ಕೆ ಸುರಕ್ಷಿತ ಮತ್ತು ಉತ್ತಮ ವಾತಾವರಣ ನಿರ್ಮಾಣವಾಗಬೇಕೆಂಬ ಆಶಯದೊಂದಿಗೆ ಈ ಮೌನ ಚಳುವಳಿ ನಡೆಯಲಿದ್ದು, ಉಡುಪಿಯ ಎಲ್ಲಾ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಈ ಪ್ರಯತ್ನಕ್ಕೆ ಬೆಂಬಲ ನೀಡುವಂತೆ ರಾಮಾಂಜಿ ನಮ್ಮಭೂಮಿ ಮನವಿ ಮಾಡಿದ್ದಾರೆ.




