ಉಡುಪಿ: “ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ ಸೈಬರ್ ವಂಚಕರು ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ 22 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ಉಡುಪಿ ತಾಲೂಕಿನ 76 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿ ಜಯಕರ ಕಾಮತ್ ಅವರಿಗೆ ಜುಲೈ 10ರಂದು ವಾಟ್ಸಾಪ್ ವೀಡಿಯೋ ಕರೆ ಬಂದಿದ್ದು, ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ತಾನು ಮುಂಬೈ ಕೊಲಬಾ ಸೈಬರ್ ಕ್ರೈಂ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದ್ದು, ಅದರಿಂದ ಮನಿ ಲಾಂಡರಿಂಗ್ ನಡೆದಿದೆ ಎಂದು ಬೆದರಿಕೆ ಹಾಕಿ ನಂಬಿಸಿದ್ದಾನೆ.
ಜುಲೈ 11ರಿಂದ 16ರವರೆಗೆ ನಿರಂತರವಾಗಿ ಕರೆ ಮಾಡಿದ ಆರೋಪಿಗಳು ತಾವು ಎಡಿಜಿಪಿ, ಇ.ಡಿ. ಹಾಗೂ ಸೈಬರ್ ಅಧಿಕಾರಿಗಳು ಎಂದು ಹೇಳಿಕೊಂಡು “ಫಂಡ್ ವೆರಿಫಿಕೇಷನ್” ಹೆಸರಿನಲ್ಲಿ ಪಿರ್ಯಾದಿದಾರರ ಬ್ಯಾಂಕ್ ಖಾತೆಯಿಂದ ಒಟ್ಟು 22 ಲಕ್ಷ ರೂಪಾಯಿಯನ್ನು ವಿವಿಧ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಈ ಸಂಬಂಧ ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಈ ರೀತಿಯ ಕರೆಗಳಿಗೆ ಯಾರೂ ಬಲಿಯಾಗಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದು, ಸಿಬಿಐ, ಇ.ಡಿ. ಅಥವಾ ಸೈಬರ್ ಅಧಿಕಾರಿಗಳು ಎಂದಿಗೂ ವೀಡಿಯೋ ಕರೆ ಮಾಡಿ ಹಣ ವರ್ಗಾವಣೆ ಮಾಡುವಂತೆ ಸೂಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನುಮಾನಾಸ್ಪದ ಕರೆಗಳು ಬಂದರೆ ತಕ್ಷಣ 1930 ಸೈಬರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಅಥವಾ ರಾಷ್ಟ್ರೀಯ ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ದೂರು ದಾಖಲಿಸುವಂತೆ ಮನವಿ ಮಾಡಿದ್ದಾರೆ.




