ಬೀದರ್: ಮಾವಿನ ಹಣ್ಣು ಸೇವಿಸಿದ ಬೆನ್ನಲ್ಲೇ ತಾಯಿ ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ತೀವ್ರ ಅಸ್ವಸ್ಥಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಹೋದರಿಯರು ದುರಂತ ಅಂತ್ಯ ಕಂಡಿರುವ ಕರುಣಾಜನಕ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಸಂಭವಿಸಿದೆ.
ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದ ನಿವಾಸಿಗಳಾದ ಭವಾನಿ ವೈಜಿನಾಥ ಮೇತ್ರೆ (17) ಮತ್ತು ಸಂಧ್ಯಾರಾಣಿ ಮೇತ್ರೆ (14) ಮೃತಪಟ್ಟ ದುರ್ದೈವಿ ಬಾಲಕಿಯರು. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.
ಮೂರು ದಿನಗಳ ಹಿಂದೆ ಶೆಂಬೆಳ್ಳಿ ಗ್ರಾಮದ ಮನೆಯೊಂದರಲ್ಲಿ ರಾತ್ರಿ ಊಟದ ಬಳಿಕ ಕುಟುಂಬದವರೆಲ್ಲರೂ ಸೇರಿ ಮಾವಿನ ಹಣ್ಣು ತಿಂದಿದ್ದಾರೆ. ಆದರೆ, ಹಣ್ಣು ತಿಂದ ಕೆಲವೇ ಸಮಯದ ಬಳಿಕ ತಾಯಿ ಇಂದುಮತಿ ಹಾಗೂ ಅವರ ಐವರು ಹೆಣ್ಣುಮಕ್ಕಳಲ್ಲಿ ತೀವ್ರ ಸ್ವರೂಪದ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಎಲ್ಲರೂ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿ, ತಕ್ಷಣವೇ ಅಸ್ವಸ್ಥಗೊಂಡ ಎಲ್ಲರನ್ನೂ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಭವಾನಿ ಮತ್ತು ಸಂಧ್ಯಾರಾಣಿ ಸಾವನ್ನಪ್ಪಿದ್ದಾರೆ.
ಈ ಘಟನೆ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.





