ಕುಂದಾಪುರ:ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಆರೋಪಿತರಿಗೆ ನ್ಯಾಯಾಲಯ 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ಅಮಾಸೆಬೈಲು ಶಾಲೆಗೆ ಹೋಗುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿಯನ್ನು ರಿಕ್ಷಾದಲ್ಲಿ ಶಾಲೆಗೆ ಕರೆದುಕೊಂಡು ಹೋಗಿ ಕರೆದುಕೊಂಡು ಬರುತ್ತಿದ್ದ ರಿಕ್ಷಾ ಚಾಲಕ ಶರತ್ ಶೆಟ್ಟಿ ಹಾಗೂ ಆತನ ಸ್ನೇಹಿತ ಪ್ರಶಾಂತ್ ನಾಯ್ಕ್ ಅವರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸಿದ್ದರು. ಈ ಬಗ್ಗೆ ನೊಂದ ಬಾಲಕಿ ಶಾಲಾ ಅಧ್ಯಾಪಕರಿಗೆ ಮಾಹಿತಿ ನೀಡಿದ್ದು, ಅಧ್ಯಾಪಕರು ದಿನಾಂಕ 15-07-2025 ರಂದು ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಈ ದೂರಿನ ಮೇರೆಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/2025 ರಂತೆ BNS-2023, POCSO ಕಾಯ್ದೆ ಹಾಗೂ SC/ST ಅಕ್ರಮ ತಡೆ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಕುಂದಾಪುರ ಡಿವೈಎಸ್‌ಪಿ ಹೆಚ್.ಡಿ. ಕುಲಕರ್ಣಿ ಅವರು ನಡೆಸಿ, 15 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಿ ಆರೋಪಿತರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಉಡುಪಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ FTSC-1 (POCSO ನ್ಯಾಯಾಲಯ)ಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯವು ಪ್ರಕರಣವನ್ನು ಎಸ್‌ಸಿ ನಂಬರ್ 67/2025 ರಲ್ಲಿ ಸ್ವೀಕರಿಸಿ ತ್ವರಿತವಾಗಿ ವಿಚಾರಣೆ ನಡೆಸಿ, ದಿನಾಂಕ 05-02-2026 ರಂದು ಆರೋಪಿತರಾದ ಶರತ್ ಶೆಟ್ಟಿ ಹಾಗೂ ಪ್ರಶಾಂತ್ ನಾಯ್ಕ್ ಅವರಿಗೆ ತಲಾ 5 ವರ್ಷಗಳ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾದ ಶ್ರೀ ಪ್ರಕಾಶ್ ಚಂದ್ರ ಶೆಟ್ಟಿ, ಶ್ರೀ ಜಯರಾಮ ಶೆಟ್ಟಿ ಹಾಗೂ ಶ್ರೀ ವೈ.ಟಿ. ರಾಘವೇಂದ್ರ ಅವರು ನೊಂದ ಬಾಲಕಿಯ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.



