ಮಂಗಳೂರು: ಕಚೇರಿಯ ಗ್ರೂಪ್ ಡಿ ಮಹಿಳಾ ನೌಕರೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ, ಮಂಗಳೂರು ಎಪಿಎಂಸಿ ಕಾರ್ಯದರ್ಶಿ ಸಿ.ಎಚ್. ಮೋಹನ್‌ಗೆ ಮಹಿಳೆಯರ ತಂಡವೊಂದು ಕಚೇರಿಗೆ ನುಗ್ಗಿ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ ಅವರ ನೇತೃತ್ವದಲ್ಲಿ ಕಚೇರಿಗೆ ದಾಳಿ ನಡೆಸಿದ ಮಹಿಳೆಯರ ತಂಡ, ಆರೋಪಿ ಕಾರ್ಯದರ್ಶಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಸಂತ್ರಸ್ತ ಮಹಿಳೆ ಕಳೆದ ಎರಡುವರೆ ವರ್ಷಗಳಿಂದ ಎಪಿಎಂಸಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಗ್ರೂಪ್ ಡಿ ನೌಕರಿಯಾಗಿ ಕೆಲಸ ಮಾಡುತ್ತಿದ್ದರು. ಆಕೆಗೆ ಮಾಸಿಕ ₹15,000 ವೇತನ ನೀಡಲಾಗುತ್ತಿತ್ತು. ಈ ವೇಳೆ ಕಾರ್ಯದರ್ಶಿ ಮೋಹನ್, ಆಕೆಯ ಮೈಕೈ ಮುಟ್ಟುವುದು, ಅಸಹ್ಯವಾಗಿ ವರ್ತಿಸುವುದು ಹಾಗೂ ತನ್ನ ಲೈಂಗಿಕ ಆಸೆಗೆ ಸಹಕರಿಸುವಂತೆ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ. “ತನ್ನೊಂದಿಗೆ ಸಹಕರಿಸಿದರೆ ವೇತನವನ್ನು ₹25,000ಕ್ಕೆ ಹೆಚ್ಚಿಸುವುದಾಗಿ ಆರೋಪಿ ಆಮಿಷ ಒಡ್ಡಿದ್ದ. ಆತನ ಕೋರಿಕೆಗೆ ಒಪ್ಪದಿದ್ದಾಗ ಸೇಡು ತೀರಿಸಿಕೊಳ್ಳಲು ಶೌಚಾಲಯ ಶುಚಿಗೊಳಿಸುವ ಕೆಲಸಕ್ಕೆ ಹಾಕಿದ್ದ,” ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
“ಕಳೆದ ಶನಿವಾರ ಆರೋಪಿ ಮೋಹನ್, ತನಗೆ ಸಹಕರಿಸಲು ಸಮ್ಮತಿ ಇದ್ದರೆ ಸೋಮವಾರ ಹಸಿರು ಸೀರೆ ಉಟ್ಟುಕೊಂಡು ಕಚೇರಿಗೆ ಬರುವಂತೆ ಸೂಚಿಸಿದ್ದ,” ಎಂದು ಸಂತ್ರಸ್ತೆ ಪ್ರತಿಭಾ ಕುಳಾಯಿ ಅವರಿಗೆ ದೂರು ನೀಡಿದ್ದರು.
ಈ ದೂರಿನ ಬೆನ್ನಲ್ಲೇ, ಸೋಮವಾರ ಪ್ರತಿಭಾ ಕುಳಾಯಿ ಹಾಗೂ ಅವರೊಡನೆ ಬಂದ ಮಹಿಳೆಯರ ತಂಡವೇ ಹಸಿರು ಸೀರೆ ಉಟ್ಟುಕೊಂಡು ಎಪಿಎಂಸಿ ಕಚೇರಿಗೆ ನುಗ್ಗಿದೆ.
ಪ್ರತಿಭಟನಾಕಾರರು ಕಚೇರಿಗೆ ನುಗ್ಗಿ ತರಾಟೆಗೆ ತೆಗೆದುಕೊಂಡಾಗ, “ನಾನೇನೂ ತಪ್ಪು ಮಾಡಿಲ್ಲ. ನ್ಯಾಯಯುತವಾಗಿ ಕೆಲಸ ನೀಡಿ ಸಂಬಳ ಕೊಡುತ್ತಿದ್ದೇನೆ” ಎಂದು ಆರೋಪಿ ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾನೆ. ಇದರಿಂದ ಮತ್ತಷ್ಟು ಕೆರಳಿದ ಮಹಿಳೆಯರು, “ನೀನೇನು ನಿನ್ನ ಜೇಬಿನಿಂದ ಸಂಬಳ ಕೊಡ್ತಿದ್ದೀಯಾ? ನಿನ್ನ ಮನೆಯಲ್ಲಿ ಕೆಲಸ ಕೊಟ್ಟಿದ್ದೀಯಾ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪಣಂಬೂರು ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸಂತ್ರಸ್ತೆಯಿಂದ ಅಧಿಕೃತ ದೂರು ಪಡೆದು, ಕಾನೂನುಬದ್ಧ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.




