Home Crime ವಿದ್ಯುತ್‌ ಶಾಕ್‌ನಿಂದ ವ್ಯಕ್ತಿ ಸಾವು : ಪ್ರಕರಣ ದಾಖಲು…!!

ವಿದ್ಯುತ್‌ ಶಾಕ್‌ನಿಂದ ವ್ಯಕ್ತಿ ಸಾವು : ಪ್ರಕರಣ ದಾಖಲು…!!

ಶಂಕರನಾರಾಯಣ, ಜೂ.11: ಸಿದ್ದಾಪುರ ಗ್ರಾಮದ ಕಿರ್ಲಾಡಿಯಲ್ಲಿ ಸಂಭವಿಸಿದ್ದ ವಿದ್ಯುತ್‌ ಶಾಕ್‌ನಿಂದ ವ್ಯಕ್ತಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪುತ್ರ ನೀಡಿದ ದೂರಿನ ಮೇರೆಗೆ ಮೃತರ ಸಹೋದರಿ ಹಾಗೂ ಆಕೆಯ ಪತಿಯ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಮಾಹಿತಿಯಂತೆ, ಶಿವಮೊಗ್ಗ ನಿವಾಸಿ ಹಾಗೂ ವ್ಯವಹಾರ ವೃತ್ತಿ ನಡೆಸುತ್ತಿರುವ ಪ್ರವೀಣ ಕುಮಾರ್ ಶೆಟ್ಟಿ (46) ಅವರು ನೀಡಿದ ದೂರಿನಲ್ಲಿ, ತಮ್ಮ ತಂದೆ ದಿವಂಗತ ಗಾಂಧಿ ಶೆಟ್ಟಿ ಹಾಗೂ ತಾಯಿ ಗೀತಾ ಶೆಟ್ಟಿ ಅವರು ಕಿರ್ಲಾಡಿಯಲ್ಲಿ ವಾಸವಾಗಿದ್ದರು ಎಂದು ತಿಳಿಸಿದ್ದಾರೆ. ಆರೋಪಿಗಳಾದ ತಮ್ಮ ಸಹೋದರಿ ಪ್ರೀತಿ ಶೆಟ್ಟಿ ಹಾಗೂ ಆಕೆಯ ಪತಿ ರಘುರಾಮ ಶೆಟ್ಟಿ ಅವರು ಕೊಲ್ಲೂರಿನ ವಸತಿಗೃಹದಲ್ಲಿ ವಾಸವಿದ್ದರೂ ಹೆಚ್ಚಿನ ಸಮಯ ಕಿರ್ಲಾಡಿಯ ಮನೆಯಲ್ಲಿ ತಂದೆ-ತಾಯಿಯೊಂದಿಗೆ ಇರುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದಿನಾಂಕ 21 ಏಪ್ರಿಲ್ 2026ರಂದು ಸಂಜೆ 7.20ರ ಸುಮಾರಿಗೆ, ಕಿರ್ಲಾಡಿಯ ನಿತಿನ್ ಎಂಬುವರು ಕರೆ ಮಾಡಿ ಗಾಂಧಿ ಶೆಟ್ಟಿ ಅವರು ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಈ ಕುರಿತು ಸಂಶಯಗೊಂಡ ಪ್ರವೀಣ ಕುಮಾರ್ ಶೆಟ್ಟಿ ಅವರು ಸ್ಥಳೀಯರಾದ ಪ್ರೇಮಾ ಶೆಟ್ಟಿ ಹಾಗೂ ಸವಿತಾ ದೇವಾಡಿಗ ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ, ಮನೆಯ ತೋಟಕ್ಕೆ ಅಳವಡಿಸಿದ್ದ ಐಬೆಕ್ಸ್ ಬೇಲಿಗೆ ಹರಿಸಿದ್ದ ವಿದ್ಯುತ್ ಸ್ಪರ್ಶದಿಂದ ಗಾಂಧಿ ಶೆಟ್ಟಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆದರೆ, ಆರೋಪಿಯಾಗಿರುವ ಪ್ರೀತಿ ಶೆಟ್ಟಿ ಅವರು ಗಾಂಧಿ ಶೆಟ್ಟಿ ಅವರು ಮನೆಯ ಮೋಟಾರು ಶೆಡ್‌ನಲ್ಲಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಎಂದು ಶಂಕರನಾರಾಯಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಅದರ ಆಧಾರದಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿ ಸಾಕ್ಷ್ಯ ನಾಶಪಡಿಸುವ ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಇದಲ್ಲದೆ, ಐಬೆಕ್ಸ್ ಬೇಲಿಗೆ ವಿದ್ಯುತ್ ಸಂಪರ್ಕ ನೀಡಿದರೆ ಮಾನವ ಜೀವಕ್ಕೆ ಅಪಾಯ ಉಂಟಾಗಬಹುದು ಎಂಬ ಅರಿವಿದ್ದರೂ ನಿರ್ಲಕ್ಷ್ಯದಿಂದ ವಿದ್ಯುತ್ ಹರಿಸಿ ಗಾಂಧಿ ಶೆಟ್ಟಿ ಅವರ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆಯ ನೈಜತೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಖಚಿತಪಡಿಸಿಕೊಂಡ ಬಳಿಕ ದೂರು ನೀಡಿರುವುದರಿಂದ ಪ್ರಕರಣ ದಾಖಲಿಸಲು ವಿಳಂಬವಾಗಿದೆ ಎಂದು ಪಿರ್ಯಾದಿದಾರರು ತಿಳಿಸಿದ್ದಾರೆ.

ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.