ಉಡುಪಿ: ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯದಾದ್ಯಂತ ಕನ್ನಡಿಗರ ಪರ ಧ್ವನಿಯಾಗಿ ಹಗಲಿರುಳು ಶ್ರಮಿಸುತ್ತಿದೆ. ಇದೇ ಹಾದಿಯಲ್ಲಿ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಅ. ರಾ. ಪ್ರಭಾಕರ್ ಪೂಜಾರಿ ಅವರ ನೇತೃತ್ವದಲ್ಲಿ ವೇದಿಕೆಯು ಜಿಲ್ಲೆಯ ಮೂಲೆಮೂಲೆಗಳಲ್ಲಿಯೂ ತಳಮಟ್ಟದ ಜನಮನವನ್ನು ತಲುಪುತ್ತಿದ್ದು, ಸಂಘಟನೆಯು ಬಲಿಷ್ಠಗೊಳ್ಳುತ್ತಿದೆ.
ಈ ಸಕಾರಾತ್ಮಕ ಬೆಳವಣಿಗೆಯ ಭಾಗವಾಗಿ, ಕುಂದಾಪುರ ತಾಲೂಕು ಅಧ್ಯಕ್ಷ ಶಿವ ಆರ್ ಪೂಜಾರಿಯವರನ್ನು ಬೈಂದೂರು ತಾಲೂಕು ಉಸ್ತುವಾರಿಯಾಗಿ ನೇಮಕ ಮಾಡಿ ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ್ ಆರ್ ಪೂಜಾರಿ ಆದೇಶಿಸಿದ್ದಾರೆ.
ಜನನಾಯಕನ ಉದಯ
‘ಬಡವರ ಬಂಧು’ ಎಂದೇ ಜನಪ್ರಿಯರಾಗಿರುವ ಶಿವ ಆರ್. ಪೂಜಾರಿ ಅವರು ಸದಾ ಜನರೊಂದಿಗೆ ಬೆರೆಯುವ, ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವ ಜನಮೆಚ್ಚಿದ ನಾಯಕರಾಗಿದ್ದಾರೆ. ಇವರ ಸರಳ ವ್ಯಕ್ತಿತ್ವ ಮತ್ತು ಜನಪರ ಕಾಳಜಿಯನ್ನು ಗಮನಿಸಿದ ಜಿಲ್ಲಾಧ್ಯಕ್ಷ ಅ. ರಾ. ಪ್ರಭಾಕರ್ ಪೂಜಾರಿ ಅವರು, ಶಿವ ಆರ್. ಪೂಜಾರಿ ಅವರ ಮೇಲೆ ವಿಶ್ವಾಸವಿಟ್ಟು ಕುಂದಾಪುರ ತಾಲೂಕಿನ ಜವಾಬ್ದಾರಿಯನ್ನು ಹೊರಿಸಿದ್ದಾರೆ.
ಬೈಂದೂರು ತಾಲೂಕು ಅಧ್ಯಕ್ಷರಾದ ಶ್ರೀಯುತ ಅಣ್ಣಪ್ಪ ಪೂಜಾರಿ ಅವರು ಅನಿವಾರ್ಯ ಕಾರಣಗಳಿಂದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ ಹಾಗಾಗಿ
ಕುಂದಾಪುರದ ಜೊತೆಗೆ ಬೈಂದೂರು ತಾಲೂಕಿನ ಕೆಲವೊಂದು ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಜಿಲ್ಲಾ ಘಟಕವು, ಬೈಂದೂರಿನ ಉಸ್ತುವಾರಿಯನ್ನು ಕೂಡ ಶಿವ ಆರ್. ಪೂಜಾರಿ ಅವರಿಗೇ ವಹಿಸಿದೆ.
ಇವರ ಸಂಘಟನಾ ಚತುರತೆ ಮತ್ತು ಕನ್ನಡಿಗರ ಹಿತ ರಕ್ಷಣೆಯಲ್ಲಿನ ಬದ್ಧತೆಯನ್ನು ಗಮನಿಸಿ ಈ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ.
“ಕನ್ನಡ ಮತ್ತು ಕನ್ನಡಿಗರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸುವುದು ನಮ್ಮ ಪ್ರಥಮ ಆದ್ಯತೆ,” ಎಂದು ಶಿವ ಆರ್. ಪೂಜಾರಿ ಅವರು ಅಭಿಪ್ರಾಯಪಟ್ಟಿದ್ದಾರೆ. ಅವರ ನೇತೃತ್ವದಲ್ಲಿ ಕುಂದಾಪುರ ಮತ್ತು ಬೈಂದೂರು ಭಾಗದಲ್ಲಿ ಸಂಘಟನೆಯು ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲಿದೆ ಎಂಬ ವಿಶ್ವಾಸವನ್ನು ಸ್ಥಳೀಯ ಕನ್ನಡಿಗರು ವ್ಯಕ್ತಪಡಿಸಿದ್ದಾರೆ.




