Home Crime ಸೀತಾ ನದಿಯಿಂದ ಅಕ್ರಮ ಮರಳುಗಾರಿಕೆ : ಇಬ್ಬರ ಬಂಧನ, ಎರಡು ವಾಹನ ವಶ…!!

ಸೀತಾ ನದಿಯಿಂದ ಅಕ್ರಮ ಮರಳುಗಾರಿಕೆ : ಇಬ್ಬರ ಬಂಧನ, ಎರಡು ವಾಹನ ವಶ…!!

ಬ್ರಹ್ಮಾವರ: ಪೆಜಮಂಗೂರು ಗ್ರಾಮದ ಕಾಡಿನಕಟ್ಟೆ ಸಮೀಪದ ಸೀತಾ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಇಬ್ಬರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿ, ಮರಳು ಸಾಗಾಟಕ್ಕೆ ಬಳಸುತ್ತಿದ್ದ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಜೂನ್ 3ರಂದು ಮಧ್ಯಾಹ್ನ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಅಶೋಕ ಮಾಳಬಗಿ ಹಾಗೂ ಸಿಬ್ಬಂದಿ ರೌಂಡ್ಸ್‌ನಲ್ಲಿದ್ದ ವೇಳೆ ಸೀತಾ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಟಿಪ್ಪರ್ ವಾಹನಕ್ಕೆ ಲೋಡ್ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿತು. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು, ನದಿಯ ದಡದಲ್ಲಿ  ಟಾಟಾ 407 ಮಿನಿ ಟಿಪ್ಪರ್‌ಗೆ ಮರಳು ತುಂಬಲಾಗುತ್ತಿರುವುದನ್ನು ಹಾಗೂ ಸಮೀಪದಲ್ಲಿ ಬೊಲೆರೋ ಕ್ಯಾಂಪರ್ ವಾಹನ ನಿಂತಿರುವುದನ್ನು ಗಮನಿಸಿದರು.

ಪೊಲೀಸರನ್ನು ಕಂಡು ಸ್ಥಳದಲ್ಲಿದ್ದ ಇಬ್ಬರು ಪರಾರಿಯಾಗಲು ಯತ್ನಿಸಿದರೂ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವಿಚಾರಣೆಯಲ್ಲಿ ರವಿ ಕೊಠಾರಿ ಹಾಗೂ ಸುರೇಶ್ ಸರ್ವೇಗಾರ್ ಎಂಬವರು ಯಾವುದೇ ಪರವಾನಿಗೆ ಇಲ್ಲದೆ, ಸರ್ಕಾರಕ್ಕೆ ರಾಜಧನ ಪಾವತಿಸದೆ, ಸರ್ಕಾರಿ ಹೊಳೆಯಿಂದ ಮರಳನ್ನು ಕಳ್ಳತನ ಮಾಡಿ ಮಾರಾಟ ಉದ್ದೇಶದಿಂದ ವಾಹನಗಳಿಗೆ ಲೋಡ್ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.