Home Crime ಶಾಲೆಯಲ್ಲಿ ಕಸ ಸುಡುವ ವೇಳೆ ಸ್ಫೋಟ : ನಾಲ್ವರು ಮಕ್ಕಳಿಗೆ ಸುಟ್ಟ ಗಾಯ, ಶಿಕ್ಷಕರ ವಿರುದ್ಧ...

ಶಾಲೆಯಲ್ಲಿ ಕಸ ಸುಡುವ ವೇಳೆ ಸ್ಫೋಟ : ನಾಲ್ವರು ಮಕ್ಕಳಿಗೆ ಸುಟ್ಟ ಗಾಯ, ಶಿಕ್ಷಕರ ವಿರುದ್ಧ ಪ್ರಕರಣ…!!

ಅಜೆಕಾರು: ಶಾಲಾ ಆವರಣದಲ್ಲಿ ಕಸ ಸುಡುವ ವೇಳೆ ಡಬ್ಬದಂತಹ ವಸ್ತುವೊಂದು ಸ್ಫೋಟಗೊಂಡು ನಾಲ್ವರು ಮಕ್ಕಳಿಗೆ ಸುಟ್ಟ ಗಾಯಗಳಾದ ಘಟನೆ ಕಾರ್ಕಳ ತಾಲೂಕಿನ ಕುಕ್ಕುಜೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಅಶೋಕನಗರ, ಕಡ್ತಲ ಗ್ರಾಮದ ನಿತ್ಯಾನಂದ ನಾಯಕ್ ಅವರ ಪುತ್ರ ಸಂಸ್ಕೃತ್ (12) ಶಾಲೆಯ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಜೂನ್ 3ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಕಂಪ್ಯೂಟರ್ ಕೊಠಡಿಯನ್ನು ಸ್ವಚ್ಛಗೊಳಿಸಿ ಕಸವನ್ನು ಶಾಲಾ ಆವರಣದ ಒಂದು ಕಡೆ ಸೇರಿಸಿ ಬೆಂಕಿ ಹಚ್ಚಿ ಸುಡಲು ವಿದ್ಯಾರ್ಥಿಗಳಿಗೆ ಸೂಚಿಸಿದ್ದರೆಂದು ಆರೋಪಿಸಲಾಗಿದೆ.

ಈ ವೇಳೆ ಕಸದಲ್ಲಿದ್ದ ಡಬ್ಬದಂತಹ ವಸ್ತುವೊಂದು ಏಕಾಏಕಿ ಸ್ಫೋಟಗೊಂಡ ಪರಿಣಾಮ ಸಂಸ್ಕೃತ್ (12), ಗಗನ್ (12), ಹೃತ್ವಿಕ್ (12) ಹಾಗೂ ಶಾಲಾ ಶಿಕ್ಷಕಿ ಅರುಣಾಕ್ಷಿ ಅವರ ಸಂಬಂಧಿ ಅದ್ವಿನ್ (11) ಎಂಬ ಬಾಲಕನಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ.

ಮಕ್ಕಳ ಸುರಕ್ಷತೆಯ ಬಗ್ಗೆ ಸೂಕ್ತ ಮುಂಜಾಗ್ರತೆ ವಹಿಸದೇ ಕಸಕ್ಕೆ ಬೆಂಕಿ ಹಚ್ಚಲು ಹೇಳಿದ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಿ ಅಜೆಕಾರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.