Home Crime ಬಾವಿಗೆ ಬಿದ್ದು ಕೂಲಿ ಕಾರ್ಮಿಕ ಸಾವು;  ಪ್ರಕರಣ ದಾಖಲು

ಬಾವಿಗೆ ಬಿದ್ದು ಕೂಲಿ ಕಾರ್ಮಿಕ ಸಾವು;  ಪ್ರಕರಣ ದಾಖಲು

ಗಂಗೊಳ್ಳಿ: ಕುಂದಬಾರಂದಾಡಿ ಗ್ರಾಮದ ದೇವಲ್ಕುಂದ ಸಮೀಪ ಬಾವಿಗೆ ಬಿದ್ದು 56 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ಮೃತರನ್ನು ಕುಂದಬಾರಂದಾಡಿ ಗ್ರಾಮದ ಮಕ್ಕಿಮನೆ ನಿವಾಸಿ ವಸಂತ ಬಂಗೇರ (56) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿಯ ಪ್ರಕಾರ, ವಸಂತ ಬಂಗೇರ ಅವರು ಜೂನ್ 29ರಂದು ಬೆಳಿಗ್ಗೆ 8 ಗಂಟೆಗೆ ಕೃಷಿ ಕೂಲಿ ಕೆಲಸಕ್ಕೆಂದು ಮನೆಯಿಂದ ತೆರಳಿದ್ದು, ಬಳಿಕ ಮನೆಗೆ ಮರಳಿರಲಿಲ್ಲ. ಕುಟುಂಬದವರು ಜೂನ್ 30ರ ಸಂಜೆವರೆಗೆ ವಿವಿಧೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಜುಲೈ 1ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಕುಂದಬಾರಂದಾಡಿ ಗ್ರಾಮದ ದೇವಲ್ಕುಂದ ಮನೆ ಸಮೀಪದ ರಮಾನಂದ ಭಟ್ ಅವರ ಆವರಣದಲ್ಲಿರುವ ಬಾವಿಯಲ್ಲಿ ವಸಂತ ಬಂಗೇರ ಅವರ ಮೃತದೇಹ ಪತ್ತೆಯಾಗಿದೆ.

ಪ್ರಾಥಮಿಕ ಮಾಹಿತಿಯಂತೆ, ಕೃಷಿ ಕೆಲಸಕ್ಕೆ ತೆರಳಿದ್ದ ವೇಳೆ ಬಾವಿಯ ಬಳಿಯ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಮೃತರ ಪುತ್ರಿ ದಿವ್ಯಶ್ರೀ ನೀಡಿದ ದೂರಿನ ಮೇರೆಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.