ಬೈಂದೂರು: ಗಂಗನಾಡು ಸಮೀಪ ಟಿಪ್ಪರ್ ಲಾರಿ ಮತ್ತು ಮೋಟಾರ್ ಸೈಕಲ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.
ಪೊಲೀಸರ ಮಾಹಿತಿಯಂತೆ, ಜೂನ್ 3ರಂದು ಸಂಜೆ ಸುಮಾರು 6:30 ಗಂಟೆಗೆ ಬೈಂದೂರು ಗ್ರಾಮದ ಗಂಗನಾಡು ಬಳಿಯ ಚಂದ್ರಾವತಿ ಅವರ ಅಂಗಡಿ ಎದುರಿನ ರಸ್ತೆಯಲ್ಲಿ ಲಾರಿಯನ್ನು ಚಾಲಕ ರಮೇಶ್ ಅವರು ಗಂಗನಾಡು ಕಡೆಯಿಂದ ಬೈಂದೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಅದೇ ದಿಕ್ಕಿನಲ್ಲಿ ಸಾಗುತ್ತಿದ್ದ ಬೈಕ್ ಅನ್ನು ಓವರ್‌ಟೇಕ್ ಮಾಡುವಾಗ ಲಾರಿಯು ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಬೈಕ್ ಸವಾರ ಮಹಾಬಲ್ ಪೂಜಾರಿ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ಲಾರಿಯ ಹಿಂಬದಿಯ ಚಕ್ರ ಅವರ ತಲೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




