ಬೈಂದೂರು: ಹಾವೇರಿ ಜಿಲ್ಲೆಯ ಸುಭಾಸ (58) ಅವರು ಕುಟುಂಬ ಸದಸ್ಯರು ಹಾಗೂ ಇತರರೊಂದಿಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ಜೂನ್ 1 ರಂದು ಬೆಳಿಗ್ಗೆ ಮುರಡೇಶ್ವರ ದರ್ಶನ ಮಾಡಿಕೊಂಡು ಧರ್ಮಸ್ಥಳಕ್ಕೆ ತೆರಳುವ ಮಾರ್ಗದಲ್ಲಿ ಶಿರೂರು ಗ್ರಾಮದ ಮೇಲ್ಪಂಕ್ತಿಯ ಸುಂಕದಕಟ್ಟೆ ಹೊಳೆ ಸೇತುವೆ ಸಮೀಪ ಊಟಕ್ಕಾಗಿ ವಾಹನ ನಿಲ್ಲಿಸಲಾಗಿತ್ತು.
ಈ ವೇಳೆ ಸುಭಾಸ ಅವರ ಮೊಮ್ಮಗ ಆಯುಷ್ (17) ಇತರ ಮಕ್ಕಳೊಂದಿಗೆ ಹೊಳೆಗೆ ನೀರು ತರಲು ತೆರಳಿದ್ದು, ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ತಕ್ಷಣ ಸಾರ್ವಜನಿಕರು ಹಾಗೂ ಕುಟುಂಬದವರು ರಕ್ಷಿಸಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ, ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




