Home Karavali Karnataka ಮಾನ್ಸಿ ಜೆ ಸುವರ್ಣ ಸಾಧನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘನೆ…!!

ಮಾನ್ಸಿ ಜೆ ಸುವರ್ಣ ಸಾಧನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘನೆ…!!

ಉಡುಪಿ: ಉತ್ತರ ಪ್ರದೇಶದ ಗ್ರೇಟರ್‌ ನೊಯಿಡಾದಲ್ಲಿ ನಡೆದ ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಉಡುಪಿ ಜಿಲ್ಲೆಯ ಮಾನ್ಸಿ ಜೆ ಸುವರ್ಣ ಅವರ ಸಾಧನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಶ್ಲಾಘಿಸಿದ್ದಾರೆ.

ಮೀನುಗಾರಿಕೆಯಲ್ಲಿ ತೊಡಗಿರುವ ಮಲ್ಪೆಯ ಮಾಲತಿ ಹಾಗೂ ಜಗದೀಶ್ ಸುವರ್ಣ ದಂಪತಿ ಪುತ್ರಿ ಮಾನ್ಸಿ ಗೆದ್ದಿರುವ ಕಂಚಿನ ಪದಕ ರಾಜ್ಯದ ಇತರ ಬಾಕ್ಸರ್‌ಗಳಿಗೆ ಸ್ಫೂರ್ತಿಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಬಾಕ್ಸಿಂಗ್‌ ಕ್ರೀಡೆ ವಿರಳ. ಈ ಕ್ರೀಡೆ ಮತ್ತಷ್ಟು ಬೆಳೆಯಲಿ. ಕರಾವಳಿಯ ಮಕ್ಕಳು ಬಾಕ್ಸಿಂಗ್‌ನಲ್ಲಿ ಮಿಂಚಲಿ ಎಂದು ಸಚಿವರು ಹಾರೈಸಿದ್ದಾರೆ.

ಮಾನ್ಸಿ ಸುವರ್ಣ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹೆಚ್ಚು ಪದಕಗಳನ್ನು ಜಯಿಸಲಿ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರಲಿ. ಆಕೆಯ‌ ಸಾಧನೆಗೆ ನಮ್ಮ ಸರ್ಕಾರ ಸದಾ ಬೆನ್ನೆಲುಬು ಆಗಿ ನಿಲ್ಲಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.