Home Latest ಮೆದುಳಿನ ರಕ್ತಸ್ರಾವ : ಮಂಗಳೂರು ಸಿಎಆರ್ ಹೆಡ್ ಕಾನ್ಸ್ ಟೇಬಲ್ ಕುಸಿದು ಬಿದ್ದು ಮೃತ್ಯು…!!

ಮೆದುಳಿನ ರಕ್ತಸ್ರಾವ : ಮಂಗಳೂರು ಸಿಎಆರ್ ಹೆಡ್ ಕಾನ್ಸ್ ಟೇಬಲ್ ಕುಸಿದು ಬಿದ್ದು ಮೃತ್ಯು…!!

  1. ಮಂಗಳೂರು : ಮಂಗಳೂರು ನಗರ ಸಶಸ್ತ್ರ ದಳದಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಹಾವೇರಿ ಮೂಲದ ಮಾರುತಿ ಲಮಾಣಿ(36) ಅವರು ಮೆದುಳಿನ ರಕ್ತಸ್ರಾವಕ್ಕೀಡಾಗಿ ಸಾವನ್ನಪ್ಪಿದ್ದಾರೆ.

ಹೈವೇ ಪೆಟ್ರೋಲಿಂಗ್ ಮಾಡುವ ಕಾರಿನಲ್ಲಿ ಡ್ರೈವರ್ ಆಗಿ ಕರ್ತವ್ಯದಲ್ಲಿದ್ದ ಮಾರುತಿ ಲಮಾಣಿ ಭಾನುವಾರ ಬೆಳಗ್ಗೆ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದರು. ಇವರ ಪತ್ನಿ ಕದ್ರಿ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿದ್ದು ಕರ್ತವ್ಯಕ್ಕೆ ತೆರಳಿದ್ದರು. ಮನೆಗೆ ತೆರಳಿ ಮಲಗಿದ್ದಾಗ ಮಾರುತಿ ಅಸ್ವಸ್ಥರಾಗಿದ್ದು ಬಳಿಕ ಸ್ಥಳೀಯರು ಸೇರಿ ಎಜೆ ಆಸ್ಪತ್ರೆಗೆ ದಾಖಲಿಸಿದ್ದರು.‌ ವೈದ್ಯರು ಪರೀಕ್ಷಿಸಿ ಮೆದುಳಿನಲ್ಲಿ ರಕ್ತಸ್ರಾವ ಆಗಿದ್ದು ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದಿದ್ದರು. ಎರಡು ದಿನ ಆಸ್ಪತ್ರೆಯಲ್ಲಿದ್ದ ಅವರು ಇಂದು ಬೆಳಗ್ಗೆ ಅಸುನೀಗಿದ್ದಾರೆ.

ಮಾರುತಿ ಸಿಎಆರ್ ಯುನಿಟ್ ನಲ್ಲಿ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದು ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿ ಪಡೆದಿದ್ದರು. ಪ್ರತಿ ವರ್ಷ ಪೊಲೀಸ್ ಇಲಾಖೆಯಲ್ಲಿ ಡಿಸೆಂಬರ್ ವೇಳೆಗೆ ಮೆಡಿಕಲ್ ಚೆಕಪ್ ನಡೆಯುತ್ತದೆ. ಮಾರುತಿ ಬಿಪಿಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಡಿಸೆಂಬರ್‌ ಚೆಕಪ್ ವೇಳೆಗೆ ಬಿಪಿ ನಾರ್ಮಲ್ ಕಂಡುಬಂದಿದ್ದರಿಂದ ಮಾತ್ರೆ ನಿಲ್ಲಿಸಿದ್ದರು ಎನ್ನಲಾಗಿದೆ. ಅವರಿಗೆ ಬೇರೆ ಯಾವುದೇ ತೊಂದರೆ ಇರಲಿಲ್ಲ. ಮದುವೆಯಾಗಿ ಐದು ವರ್ಷವಾಗಿದ್ದು ನಾಲ್ಕು ಮತ್ತು ಒಂದುವರೆ ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.