ಶಂಕರನಾರಾಯಣ: ವಿಪರೀತ ಗಾಳಿ-ಮಳೆಯ ಸಂದರ್ಭ ವಿದ್ಯುತ್ ತಂತಿ ತಾಗಿ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಹಿಲಿಯಾಣ ಗ್ರಾಮದ ಚೋರಾಡಿ ಕಲ್ಲುಗದ್ದೆಯಲ್ಲಿ ನಡೆದಿದೆ.
ಮೃತರನ್ನು ಗಣೇಶ (ವಯಸ್ಸು ತಿಳಿದುಬಂದಿಲ್ಲ) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಎಸ್‌ಎಲ್‌ವಿ ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದು, ಪತ್ನಿ ಸುಶ್ಮಿತಾ ಅವರೊಂದಿಗೆ ದೈವದ ಕೆಲಸದ ನಿಮಿತ್ತ ಮೇ 18ರಂದು ಊರಿಗೆ ಬಂದಿದ್ದರು.
ಜೂನ್ 7ರಂದು ಸಂಜೆ ಸುಮಾರು 6:45ರ ವೇಳೆಗೆ ಭಾರೀ ಗಾಳಿ-ಮಳೆ ಆರಂಭವಾಗಿದ್ದು, ಮನೆಯ ಕೊಟ್ಟಿಗೆಯಲ್ಲಿದ್ದ ವಿದ್ಯುತ್ ತಂತಿ ಕೆಳಗೆ ಜೋತು ಬಿದ್ದಿತ್ತು. ಇದನ್ನು ಗಮನಿಸಿದ ಗಣೇಶ ಅವರು ತಂತಿಯನ್ನು ಮೇಲಕ್ಕೆ ಕಟ್ಟಲು ಮುಂದಾದಾಗ, ಹಳೆಯದಾಗಿದ್ದ ವಿದ್ಯುತ್ ತಂತಿ ತುಂಡಾಗಿ ಅವರ ಎದೆ ಭಾಗಕ್ಕೆ ತಗುಲಿದೆ. ಪರಿಣಾಮ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ತಕ್ಷಣ ಕುಟುಂಬದವರು ಹಾಗೂ ಸಂಬಂಧಿಕರು ಅವರನ್ನು ಹಾಲಾಡಿಯ ದುರ್ಗಾ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಪರೀಕ್ಷಿಸಿ ಗಣೇಶ ಅವರು ಈಗಾಗಲೇ ಮೃತಪಟ್ಟಿರುವುದಾಗಿ ರಾತ್ರಿ ಸುಮಾರು 7:30ಕ್ಕೆ ತಿಳಿಸಿದ್ದಾರೆ.
ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 14/2026ರಡಿ ಕಲಂ 194 BNSS ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




