Home Karnataka News ಮಹೇಶ್ ಶೆಟ್ಟಿ ತಿಮರೋಡಿ ಉಚ್ಛಾಟನೆ ಆದೇಶ ರದ್ದು : ಹೈಕೋರ್ಟ್‌ನಿಂದ ಮಹತ್ವದ ಆದೇಶ…!!

ಮಹೇಶ್ ಶೆಟ್ಟಿ ತಿಮರೋಡಿ ಉಚ್ಛಾಟನೆ ಆದೇಶ ರದ್ದು : ಹೈಕೋರ್ಟ್‌ನಿಂದ ಮಹತ್ವದ ಆದೇಶ…!!

ಬೆಂಗಳೂರು: ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ದೊಡ್ಡ ಮಟ್ಟದ ಕಾನೂನು ಜಯ ಸಿಕ್ಕಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗಾಧಿಕಾರಿಗಳು ತಿಮರೋಡಿ ಅವರ ವಿರುದ್ಧ ಹೊರಡಿಸಿದ್ದ ಉಚ್ಛಾಟನೆ ಆದೇಶವನ್ನು ನ್ಯಾಯಾಲಯವು ರದ್ದುಗೊಳಿಸಿದೆ.

ಈ ಹಿಂದೆ ಹೊರಡಿಸಲಾಗಿದ್ದ ಆದೇಶದ ಪ್ರಕಾರ, ತಿಮರೋಡಿ ಅವರನ್ನು 2025ರ ಡಿಸೆಂಬರ್‌ನಿಂದ 2026ರ ಸೆಪ್ಟೆಂಬರ್‌ವರೆಗೆ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಅಧಿಕಾರಿಗಳ ಕ್ರಮವು ಕಾನೂನುಬದ್ಧವಾಗಿಲ್ಲ ಎಂದು ತೀರ್ಪು ನೀಡಿದೆ.

ವಿಚಾರಣೆ ವೇಳೆ ನ್ಯಾಯಾಲಯವು ಅಧಿಕಾರಿಗಳ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿದೆ. ತಿಮರೋಡಿ ಅವರ ವಿರುದ್ಧ ದಾಖಲಾಗಿದ್ದ 32 ಪ್ರಕರಣಗಳ ಪೈಕಿ 16 ಪ್ರಕರಣಗಳಲ್ಲಿ ಅವರು ಈಗಾಗಲೇ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದಾರೆ. ಆದರೂ ಅಧಿಕಾರಿಗಳು ಹಳೆಯ ಮತ್ತು ಈಗಾಗಲೇ ಮುಕ್ತಾಯಗೊಂಡಿರುವ ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಧಿಕಾರಿಗಳು ಅರ್ಜಿದಾರರ ಆಕ್ಷೇಪಣೆಗಳನ್ನು ಗಣನೆಗೆ ತೆಗೆದುಕೊಳ್ಳದೆ, ಮನಸ್ಸೋ ಇಚ್ಛೆ ಮತ್ತು ಯಾಂತ್ರಿಕವಾಗಿ ಕೆಲಸ ಮಾಡಿದ್ದಾರೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಉಚ್ಛಾಟನೆಯಂತಹ ಗಂಭೀರ ಕ್ರಮವು ಒಬ್ಬ ವ್ಯಕ್ತಿಯ ಸಂಚಾರದ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವುದರಿಂದ, ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅತ್ಯಂತ ಎಚ್ಚರಿಕೆ ಮತ್ತು ಬಲವಾದ ಸಾಕ್ಷ್ಯಗಳ ಅವಶ್ಯಕತೆ ಇರುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ಅಂತಿಮವಾಗಿ, ಈ ಹಿಂದಿನ ಉಚ್ಛಾಟನೆ ಆದೇಶವನ್ನು ಪೂರ್ಣವಾಗಿ ರದ್ದುಗೊಳಿಸಿರುವ ಹೈಕೋರ್ಟ್, ಈ ಪ್ರಕರಣವನ್ನು ಮರುಪರಿಶೀಲಿಸುವಂತೆ ಪುತ್ತೂರು ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದೆ. ತಿಮರೋಡಿ ಅವರು ಸಲ್ಲಿಸಿರುವ ಆಕ್ಷೇಪಣೆಗಳನ್ನು ಮತ್ತು ಅವರ ವಿರುದ್ಧ ಇರುವ ಪ್ರಕರಣಗಳ ಪ್ರಸ್ತುತ ಸ್ಥಿತಿಯನ್ನು ಸರಿಯಾಗಿ ಅಭ್ಯಸಿಸಿ, ಮುಂದಿನ ಮೂರು ವಾರಗಳ ಒಳಗಾಗಿ ಕಾನೂನುಬದ್ಧವಾದ ಹೊಸ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.

ಸಾರ್ವಜನಿಕ ಹೋರಾಟಗಳಲ್ಲಿ ಸಕ್ರಿಯರಾಗಿರುವ ತಮಗೆ ತೊಂದರೆ ನೀಡಲು ರಾಜಕೀಯ ಪ್ರೇರಿತವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ತಿಮರೋಡಿ ಅವರ ವಾದಕ್ಕೆ ಈ ತೀರ್ಪಿನ ಮೂಲಕ ಬಲ ಸಿಕ್ಕಂತಾಗಿದೆ.