ಮೂಡುಬಿದಿರೆ: ತಾಲೂಕಿಗೆ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಘೋಷಣೆ ಮಾಡಬೇಕು ಮತ್ತು ಖಾಸಗಿ ಆಸ್ಪತ್ರೆಗಳೊಂದಿಗಿನ ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಎ, 21ರಂದು ಬೃಹತ್ ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ ತಿಳಿಸಿದ್ದಾರೆ.
ಸಾರ್ವಜನಿಕರ ಸಹಭಾಗಿತ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ಮೂಡುಬಿದಿರೆ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಧರಣಿಗೂ ಮುನ್ನ ಬೆಳಗ್ಗೆ 9:30ಕ್ಕೆ ಹಳೆ ಪೊಲೀಸ್ ಠಾಣಾ ಬಳಿಯಿಂದ ಮಿನಿ ವಿಧಾನ ಸೌಧದವರೆಗೆ ಬೃಹತ್ ಮೆರವಣಿಗೆ ಸಾಗಲಿದೆ.
ಮೂಡುಬಿದಿರೆ ತಾಲೂಕಾಗಿ ಹಲವು ವರ್ಷ ಕಳೆದರೂ ಸಮರ್ಪಕ ವೈದ್ಯಕೀಯ ಸೌಲಭ್ಯಗಳಿಲ್ಲದೆ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಪಟ್ಟಣದ ಹೃದಯಭಾಗದಲ್ಲಿರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವು ನಿರ್ವಹಣೆಯ ಕೊರತೆಯಿಂದ ಮುಚ್ಚುವ ಹಂತ ತಲುಪಿದೆ. ಇಲ್ಲಿ ಅರಿವಳಿಕೆ ಮತ್ತು ದಂತ ವೈದ್ಯರು ಮಾತ್ರ ಲಭ್ಯವಿದ್ದು ಶುಶೂಷಕರು ಹಾಗೂ ಸಿಬ್ಬಂದಿಗಳ ತೀವ್ರ ಕೊರತೆಯಿದೆ. ಹಣಕಾಸಿನ ಸಮಸ್ಯೆಯಿಂದಾಗಿ ಔಷಧಿಗಳ ಲಭ್ಯತೆಯೂ ಇಲ್ಲದಂತಾಗಿದ್ದು, 30 ಹಾಸಿಗೆಗಳಿದ್ದರೂ ಸೌಲಭ್ಯಗಳಿಲ್ಲದೆ ರೋಗಿಗಳು ಆಸ್ಪತ್ರೆಯಿಂದ ದೂರ ಉಳಿಯುವಂತಾಗಿದೆ.
ರಾಜ್ಯ ಸರ್ಕಾರವು 2027ರ ಬಜೆಟ್‌ನಲ್ಲಿ ಮೂಡುಬಿದಿರೆಗೆ ಸರ್ಕಾರಿ ಆಸ್ಪತ್ರೆಯನ್ನು ಘೋಷಿಸಬೇಕು. ಈ ಆಸ್ಪತ್ರೆ ಯಲ್ಲಿ ಹೊರರೋಗಿ ಮತ್ತು ಒಳರೋಗಿ ವಿಭಾಗ, 24/7 ತುರ್ತು ಚಿಕಿತ್ಸೆ ಎಕ್ಸರೇ, ಇಸಿಜಿ, ಅಲ್ಟಾಸೌಂಡ್ ಸೇರಿ ದಂತೆ ಎಲ್ಲಾ ರೀತಿಯ ರೋಗ ನಿರ್ಣಯ ಪರೀಕ್ಷೆಗಳು ಉಚಿತವಾಗಿ ಸಿಗಬೇಕು. ಪ್ರಸೂತಿ, ಸ್ತ್ರೀ ರೋಗ, ಮೂಳೆ ಹಾಗೂ ದಂತ ಚಿಕಿತ್ಸೆಯೊಂದಿಗೆ ಡಯಾಲಿಸಿಸ್ ಮತ್ತು ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡುವುದನ್ನು ಕೈಬಿಟ್ಟು, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಬೇಕು ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಗಳಾಗಿವೆ.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ತಾಲೂಕು ಸಮಿತಿ ವತಿಯಿಂದ ಈ ಹೋರಾಟ ಆಯೋಜಿಸಲಾಗಿದೆ ಎಂದು ಯಾದವ ಶೆಟ್ಟಿ ತಿಳಿಸಿದರು.
ಸಂಘಟನೆಯ ತಾಲೂಕು ಸಮಿತಿ ಕಾರ್ಯದರ್ಶಿ ರಮಣಿ , ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ , ಸದಸ್ಯೆ ರಾಧ, ತಾಲೂಕು ಸಮಿತಿ ಸದಸ್ಯರಾದ ಗಿರಿಜಾ, ಶಂಕರ, ಲಕ್ಷ್ಮೀ ಸುದ್ದಿಗೋಷ್ಠಿಯಲ್ಲಿದ್ದರು.





