Home Karnataka News ಮಾಧ್ಯಮ ಸ್ಪಂದನ ಸಂಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ಆರ್ಟ್ ಆಫ್ ಲಿವಿಂಗ್...

ಮಾಧ್ಯಮ ಸ್ಪಂದನ ಸಂಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ಆರ್ಟ್ ಆಫ್ ಲಿವಿಂಗ್ ಪ್ರಶಸ್ತಿ…!!

ಬೆಂಗಳೂರು : ಮಾಧ್ಯಮ ಸ್ಪಂದನದ ಮೂಲಕ ಸಲ್ಲಿಸಿರುವ ಜನಸೇವೆಯನ್ನು ಗುರುತಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ ರಾಜ್ಯಮಟ್ಟದ ಪ್ರತಿಷ್ಠಿತ “ಅನುದಿನದ ತೆರೆಮರೆಯ ಸಾಧಕ” ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಪರಮ ಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರುಜೀ ಅವರ 75ನೇ ಜನ್ಮದಿನಾಚರಣೆಯ ಅಂಗವಾಗಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ 25 ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕ ಸೇವೆಯ ಉದ್ದೇಶದಿಂದ ಕೊಡಗಿನ ಪತ್ರಕರ್ತರನ್ನು ಒಗ್ಗೂಡಿಸಿ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು “ಮಾಧ್ಯಮ ಸ್ಪಂದನ” ಸಂಸ್ಥೆಯನ್ನು ಸ್ಥಾಪಿಸಿದರು. ಕೋವಿಡ್ ಅವಧಿಯಲ್ಲಿ ಅಗತ್ಯವಿರುವವರಿಗೆ ಆಹಾರ ಕಿಟ್‌ಗಳು ಮತ್ತು ಔಷಧಿಗಳನ್ನು ವಿತರಿಸುವುದು, ಹೊರ ಜಿಲ್ಲೆಗಳಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವುದು ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಯಿತು. ಕೋವಿಡ್‌ಗೆ ಬಲಿಯಾದ ಇಬ್ಬರ ಅಂತ್ಯಕ್ರಿಯೆಯನ್ನು ಸಹ ಮಾಧ್ಯಮ ಸ್ಪಂದನದ ಮೂಲಕ ನೆರವೇರಿಸಲಾಯಿತು.

ಕೋವಿಡ್ ನಂತರವೂ ಮಾಧ್ಯಮ ಸ್ಪಂದನ ತನ್ನ ಜನಸೇವೆಯನ್ನು ಮುಂದುವರಿಸಿದ್ದು, ದಾನಿಗಳ ನೆರವಿನಿಂದ ಆರ್ಥಿಕವಾಗಿ ದುರ್ಬಲ ಕುಟುಂಬಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಅಸಹಾಯಕರ ವೈದ್ಯಕೀಯ ಚಿಕಿತ್ಸೆಗೆ ನೆರವು ಒದಗಿಸಿದೆ. ಅಲ್ಲದೆ “ಡ್ರಗ್ಸ್ ಮುಕ್ತ ಕೊಡಗು” ಜಾಗೃತಿ ಅಭಿಯಾನವನ್ನು ನಡೆಸಿ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದೆ.

ಜಾತಿ, ಧರ್ಮ, ಮತ, ಪಂಥ ಅಥವಾ ವ್ಯಕ್ತಿಯ ಭೇದವಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಾಧ್ಯಮ ಸ್ಪಂದನ ತಂಡ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ.

26 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಪ್ರಸ್ತುತ “ಪ್ರತಿನಿಧಿ” ಪತ್ರಿಕೆಯ ಮೈಸೂರು ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾಗಿದ್ದು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪತ್ರಿಕೋದ್ಯಮದ ನೈತಿಕತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ರಮೇಶ್ ಕುಟ್ಟಪ್ಪ ಅವರು ರಾಜಕಾರಣಿಯೊಬ್ಬರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಬಲಿಗರು ಒಡ್ಡಿದ್ದ 1.50 ಕೋಟಿ ರೂಪಾಯಿಗಳ ಆಮಿಷವನ್ನು ತಿರಸ್ಕರಿಸಿದ್ದಕ್ಕಾಗಿ ವಿಆರ್‌ಎಲ್ ಸಂಸ್ಥಾಪಕ ಡಾ. ವಿಜಯ ಸಂಕೇಶ್ವರ ಅವರಿಂದ “ದಿಟ್ಟ ಪತ್ರಕರ್ತ” ಪ್ರಶಸ್ತಿಯೊಂದಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಚಿನ್ನದ ನಾಣ್ಯವನ್ನು ಪಡೆದಿದ್ದಾರೆ.

ಇದಲ್ಲದೆ ಕರ್ನಾಟಕ ರಾಜ್ಯ ಸರ್ಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿ, ಕೊಡಗು ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ, ಕಾಸರಗೋಡು ಪತ್ರಕರ್ತರ ಸಂಘದ ಅಂತರ್‌ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘಟನೆಗಳಿಂದ ಅತ್ಯುತ್ತಮ ವರದಿಗಾರಿಕೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದು, ಭಾರತೀಯ ಪತ್ರಕರ್ತರ ಒಕ್ಕೂಟ ಸೇರಿದಂತೆ ಅನೇಕ ಮಾಧ್ಯಮ ಮತ್ತು ಸಾಮಾಜಿಕ ಸಂಘ-ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ.