ಕುಂದಾಪುರ: ತಾಲೂಕಿನ ಕೊರ್ಗಿ ಗ್ರಾಮದ ಮಣೂರುಮನೆ ಪ್ರದೇಶದಲ್ಲಿರುವ ಸರ್ಕಾರಿ ಹಾಡಿಯಲ್ಲಿ ಕೋಳಿ ಅಂಕ ಜುಗಾರಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಿರಂಜನ್ ಗೌಡ ಬಿ.ಎಸ್. ಅವರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದ ಘಟನೆ ಜುಲೈ 12ರಂದು ನಡೆದಿದೆ.
ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಸ್ಥಳದಲ್ಲೇ ಕೋಳಿ ಅಂಕ ಜುಗಾರಿ ಆಡುತ್ತಿದ್ದ ಮಂಜುನಾಥ್ (45) ತಲ್ಲೂರು, ಸುಕ್ಷಯ್ (29) ಮಣೂರು, ಶರಣ್ (27) ಬೇಳೂರು, ರಮೇಶ್ (32) ಕೊರ್ಗಿ ಹಾಗೂ ರಜತ್ (27) ಕೆದೂರು ಗ್ರಾಮ ನಿವಾಸಿಗಳನ್ನು ಬಂಧಿಸಿದ್ದಾರೆ.
ದಾಳಿಯ ವೇಳೆ ಆರೋಪಿಗಳಿಂದ ₹1,600 ನಗದು, 2 ಜೀವಂತ ಕೋಳಿ ಹುಂಜಗಳು, ಒಂದು ಕೋಳಿ ಬಾಳು, ಕೋಳಿಗಳ ಕಾಲಿಗೆ ಕತ್ತಿ ಕಟ್ಟಲು ಬಳಸಿದ ಹಗ್ಗ, ಎರಡು ಬೀಣಿ ಕೈಚೀಲಗಳು ಸೇರಿದಂತೆ ಹೊಂಡಾ ಶೈನ್ ಬೈಕ್, ಕೆಂಪು ಬಣ್ಣದ ಸ್ಕೂಟಿ ಹಾಗೂ ಯಮಹಾ ಆರ್‌ಎಕ್ಸ್ ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕೋಳಿಗಳಿಗೆ ಆಹಾರ ಹಾಗೂ ನೀರು ನೀಡದೆ ಹಿಂಸೆ ನೀಡಿ, ಕಾಲಿಗೆ ಕತ್ತಿ ಕಟ್ಟಿಸಿ ಹಣ ಪಣವಾಗಿ ಇಟ್ಟು ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ನಡೆಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




