Home Latest ಉಡುಪಿಯಲ್ಲಿ ‘ಮನೆಗೊಂದು ಗ್ರಂಥಾಲಯ’ ಯೋಜನೆಗೆ ಚಾಲನೆ:ಭಕ್ತಿಗೆ ದೇವರ ಮನೆ, ಜ್ಞಾನಕ್ಕೆ ಪುಸ್ತಕ ಮನೆ : ಡಾ.ಮಾನಸ

ಉಡುಪಿಯಲ್ಲಿ ‘ಮನೆಗೊಂದು ಗ್ರಂಥಾಲಯ’ ಯೋಜನೆಗೆ ಚಾಲನೆ:ಭಕ್ತಿಗೆ ದೇವರ ಮನೆ, ಜ್ಞಾನಕ್ಕೆ ಪುಸ್ತಕ ಮನೆ : ಡಾ.ಮಾನಸ

ಉಡುಪಿ: ಭಕ್ತಿಯ ಸಂಕೇತವಾಗಿ ಎಲ್ಲರ ಮನೆಯಲ್ಲೂ ದೇವರ ಮನೆ ಇರುವಂತೆಯೇ ಜ್ಞಾನದ ಸಂಕೇತವಾಗಿ ಪ್ರತಿ ಮನೆಯಲ್ಲೂ ಪುಸ್ತಕ ಮನೆ (ಗ್ರಂಥಾಲಯ) ಇರಬೇಕು. ಪುಸ್ತಕಗಳ ಓದಿನಿಂದ ಬದುಕಿನಲ್ಲಿ ಎಂತಹ ಸವಾಲು ಬಂದರೂ ಎದುರಿಸಿ ಗೆಲ್ಲಬಹುದು ಎಂದು ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅಭಿಪ್ರಾಯಪಟ್ಟರು.

 

ಉಡುಪಿ ಶ್ರೀಕೃಷ್ಣ ಮಠ ಸಮೀಪದ ವಾದಿರಾಜ ರಸ್ತೆ ಮಾರ್ಗದಲ್ಲಿರುವ ಉಡುಪಿ ಟೆಂಪಲ್ ಇನ್ ಹೋಮ್ ಸ್ಟೇಯಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಮೇ 21ರ ಗುರುವಾರ ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

 

ಉಡುಪಿ ತಾಲೂಕು ಕಸಾಪ ಅಧ್ಯಕ್ಷ ಹಾಗೂ ಮನೆಗೊಂದು ಗ್ರಂಥಾಲಯ ಅಭಿಯಾನದ ಉಡುಪಿ ಜಿಲ್ಲಾ ಸಹಸಂಚಾಲಕ ರವಿರಾಜ್ ಎಚ್.ಪಿ. ಮಾತನಾಡಿ, ತಾಲೂಕು ಕಸಾಪ ವತಿಯಿಂದ 2 ವರ್ಷದ ಹಿಂದೆಯೇ ‘ಮನೆಯೇ ಗ್ರಂಥಾಲಯ’ ಅಭಿಯಾನ ಆರಂಭಗೊಂಡಿದ್ದು ಮುಂದುವರಿದಿದೆ. ಬಸ್ ನಿಲ್ದಾಣ, ಆಸ್ಪತ್ರೆ, ಐಸ್ಕ್ರೀಮ್ ಅಂಗಡಿಗಳಲ್ಲೂ ಸಹ ಗ್ರಂಥಾಲಯ ತೆರೆದಿದ್ದೇವೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ 210 ಮನೆಗಳಲ್ಲಿ ಗ್ರಂಥಾಲಯ ನಿರ್ಮಾಣವಾಗಿದೆ ಎಂದರು.

 

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಯು.ವಿಶ್ವನಾಥ್ ಶೆಣೈ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಅಪ್ನಾ ಹಾಲಿಡೇಸ್ ಆಡಳಿತ ನಿರ್ದೇಶಕ ನಾಗರಾಜ್ ಹೆಬ್ಬಾರ್ ಮರವಂತೆ, ಡಾ.ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ. ಗಣನಾಥ್ ಶೆಟ್ಟಿ ಎಕ್ಕಾರು, ಕಸಾಪ ತಾಲೂಕು ಘಟಕದ ರಂಜಿನಿ ವಸಂತ್, ದೀಪಾ ಕರ್ಕಿ, ಸತೀಶ್ ಕೊಡವೂರು, ರಾಜೇಶ್ ಭಟ್ ಣಿಯಾಡಿ ಉಪಸ್ಥಿತರಿದ್ದರು.

 

ಮನೆಗೊಂದು ಗ್ರಂಥಾಲಯ ಉಡುಪಿ ಜಿಲ್ಲಾ ಜಾಗೃತಿ ಸಮಿತಿ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರನ್ನು ಉಡುಪಿ ತಾಲೂಕು ಕಸಾಪ ವತಿಯಿಂದ ಸನ್ಮಾನಿಸಲಾಯಿತು.

 

ಜನಾರ್ದನ್ ಕೊಡವೂರು ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ಜನಾರ್ದನ್ ವಂದಿಸಿದರು.

 

ಮನೆಗೊಂದು ಗ್ರಂಥಾಲಯ ಮಾಡುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ 10 ಜನರ ಜಿಲ್ಲಾ ಜಾಗೃತಿ ಸಮಿತಿ ಕಾರ್ಯಪ್ರವೃತ್ತವಾಗಿದೆ. ಎಲ್ಲರ ಸಹಕಾರದಲ್ಲಿ ಈ ಅಭಿಯಾನವನ್ನು ರಾಜ್ಯಾದ್ಯಂತ ಯಶಸ್ವಿಯಾಗಿಸಲು, ಜನರು ಮತ್ತೆ ಓದುವಂತಾಗಲು ಎಲ್ಲರ ಸಹಕಾರ ಅಗತ್ಯ. — ಡಾ. ಮಾನಸ. ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ.