ಬೈಂದೂರು: ಕ್ರಿಕೆಟ್ ಆಟದ ವಿಚಾರವಾಗಿ ಉಂಟಾಗಿದ್ದ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಳಿಹೊಳೆ ಗ್ರಾಮದ ಶಿವರಾಜ್ ಶೆಟ್ಟಿ (38) ನೀಡಿದ ದೂರಿನ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ಪ್ರತಾಪ್ ಶೆಟ್ಟಿ ಎಂಬಾತನೊಂದಿಗೆ ಕ್ರಿಕೆಟ್ ಆಟದ ವಿಚಾರದಲ್ಲಿ ಮನಸ್ತಾಪ ಉಂಟಾಗಿತ್ತು. ಬಳಿಕ ಪ್ರತಾಪ್ ಶೆಟ್ಟಿ ಪಿರ್ಯಾದಿದಾರರ ವಿರುದ್ಧ ಹಗುರವಾಗಿ ಮಾತನಾಡಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಮೇ 27ರಂದು ರಾತ್ರಿ 11:15ರ ಸುಮಾರಿಗೆ ಪ್ರತಾಪ್ ಶೆಟ್ಟಿ ತನ್ನ ಸಹಚರರಾದ ರಾಜು, ವಿಷ್ನೇಶ್ ಗಾಣಿಗ, ಪ್ರಸಾದ್ ಆಚಾರಿ ಹಾಗೂ ಇತರರೊಂದಿಗೆ ಕಾರು ಮತ್ತು ಬೈಕ್‌ನಲ್ಲಿ ಶಿವರಾಜ್ ಶೆಟ್ಟಿ ಅವರ ಮನೆಗೆ ತೆರಳಿ ಕಂಪೌಂಡ್ ಒಳಗೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದಲ್ಲದೆ, ಕೈಯಲ್ಲಿ ಕಬ್ಬಿಣದ ರಾಡ್ ಸೇರಿದಂತೆ ಇತರ ಆಯುಧಗಳನ್ನು ಹಿಡಿದುಕೊಂಡು ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ತಿಳಿಸಲಾಗಿದೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




