ಹೊಸದಿಲ್ಲಿ : ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಪ್ಲ್ಯಾಟ್‌ಫಾರ್ಮ್‌ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಕೆಲವು ಕ್ರಿಕೆಟಿಗರು ಮತ್ತು ಚಿತ್ರರಂಗದ ಸೆಲೆಬ್ರಿಟಿಗಳಿಗೆ ಸೇರಿದ ಕೋಟ್ಯಂತರ ರೂ.ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು(ಈ.ಡಿ.) ಶೀಘ್ರವೇ ಮುಟ್ಟುಗೋಲು ಹಾಕಿಕೊಳ್ಳುವ ನಿರೀಕ್ಷೆಯಿದೆ.
‘1xBet’ಪೋರ್ಟಲ್‌ಗೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಈ ಸೆಲೆಬ್ರಿಟಿಗಳು ಜಾಹೀರಾತಿಗಾಗಿ ತಮಗೆ ಪಾವತಿಸಲಾಗಿದ್ದ ಹಣವನ್ನು ವಿವಿಧ ಆಸ್ತಿಗಳನ್ನು ಖರೀದಿಸಲು ಬಳಸಿದ್ದು ಪತ್ತೆಯಾಗಿದೆ. ಈ ಹಣವು ಪಿಎಂಎಲ್‌ಎ ಕಾಯ್ದೆಯಡಿ ‘ಅಪರಾಧದ ಆದಾಯವಾಗಿದೆ’ ಎಂದು ಅಧಿಕೃತ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.
ಯುಎಇಯಂತಹ ವಿದೇಶಗಳಲ್ಲಿರುವ ಕೆಲವು ಆಸ್ತಿಗಳು ಸೇರಿದಂತೆ ಈ ಸೆಲೆಬ್ರಿಟಿಗಳ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಈ.ಡಿ.ಶೀಘ್ರವೇ ಪಿಎಂಎಲ್‌ಎ ಅಡಿ ತಾತ್ಕಾಲಿಕ ಜಪ್ತಿ ಆದೇಶವನ್ನು ಹೊರಡಿಸುವ ನಿರೀಕ್ಷೆಯಿದೆ.
ಈ.ಡಿ.ತನ್ನ ತನಿಖೆಯ ಭಾಗವಾಗಿ ಕಳೆದ ಕೆಲವು ವಾರಗಳಲ್ಲಿ ಕ್ರಿಕೆಟಿಗರಾದ ಯುವರಾಜ ಸಿಂಗ್, ಸುರೇಶ ರೈನಾ, ರಾಬಿನ್ ಉತ್ತಪ್ಪ ಮತ್ತು ಶಿಖರ ಧವನ್, ಚಿತ್ರರಂಗದ ಸೆಲೆಬ್ರಿಟಿಗಳಾದ ಸೋನು ಸೂದ್, ಮಾಜಿ ಟಿಎಂಸಿ ಸಂಸದೆಯೂ ಆಗಿರುವ ಮಿಮಿ ಚಕ್ರವರ್ತಿ ಮತ್ತು ಅಂಕುಶ ಹಜ್ರಾ(ಬೆಂಗಾಲಿ ಸಿನೆಮಾ) ಅವರನ್ನು ವಿಚಾರಣೆಗೊಳಪಡಿಸಿದೆ. ಕೆಲವು ಆನ್‌ಲೈನ್ ಪ್ರಭಾವಿಗಳನ್ನೂ ಈ.ಡಿ.ಪ್ರಶ್ನಿಸಿದೆ.
ಈ.ಡಿ.ಪಿಎಂಎಲ್‌ಎ ಕಲಂ 50 ರಡಿ ಈ ಸೆಲೆಬ್ರಿಟಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳ ಹೇಳಿಕೆಗಳನ್ನು ಈ.ಡಿ.ದಾಖಲಿಸಿಕೊಳ್ಳಬೇಕಿದೆ.
‘ 1xBetನ ಭಾರತದ ರಾಯಭಾರಿ’ ನಟಿ ಊರ್ವಶಿ ರೌಟೇಲಾರಿಗೆ ಸಮನ್ಸ್ ನೀಡಲಾಗಿತ್ತು.ಆದರೆ ಮೂಲಗಳು ತಿಳಿಸಿದಂತೆ ಅವರು ವಿದೇಶದಲ್ಲಿದ್ದರಿಂದ ಈ.ಡಿ.ಮುಂದೆ ವಿಚಾರಣೆಗೆ ಹಾಜರಾಗಿರಲಿಲ್ಲ.
ಕ್ಯುರಸಾವ್ ನೋಂದಾಯಿತ1xBet ಣ ಪ್ರಕಾರ ಅದು ಜಾಗತಿಕ ಬುಕ್‌ಮೇಕರ್ ಆಗಿದ್ದು, ಬೆಟ್ಟಿಂಗ್ ಉದ್ಯಮದಲ್ಲಿ 18 ವರ್ಷಗಳ ಅನುಭವವನ್ನು ಹೊಂದಿದೆ. ಕಂಪನಿಯ ಜಾಲತಾಣದಲ್ಲಿ ಲಭ್ಯ ಮಾಹಿತಿಯಂತೆ ಗ್ರಾಹಕರು 70 ಭಾಷೆಗಳಲ್ಲಿ ಲಭ್ಯವಿರುವ ಕಂಪನಿಯ ವೆಬ್‌ಸೈಟ್ ಮತ್ತು ಆ್ಯಪ್‌ನಲ್ಲಿ ಸಾವಿರಾರು ಕ್ರೀಡಾಕೂಟಗಳ ಮೇಲೆ ಬೆಟ್ಟಿಂಗ್ ಮಾಡಬಹುದು.
ಕೇಂದ್ರ ಸರಕಾರವು ಇತ್ತೀಚಿಗೆ ಕಾನೂನನ್ನು ತರುವ ಮೂಲಕ ಭಾರತದಲ್ಲಿ ನೈಜ ಹಣದ ಆನ್‌ಲೈನ್ ಗೇಮಿಂಗ್‌ನ್ನು ನಿಷೇಧಿಸಿದೆ.