ಬೆಂಗಳೂರು : ನಗರದ ಅಂಗಡಿಯಲ್ಲಿ ಸೀರೆ ಕಳವು ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರನ್ನು ನಡು ರಸ್ತೆಯಲ್ಲಿ ಬೂಟ್ ಕಾಲಿನಲ್ಲಿ ಒದ್ದು ಕ್ರೌರ್ಯ ಮೆರೆದ ಬಟ್ಟೆ ಅಂಗಡಿ ಮಾಲೀಕ ಹಾಗೂ ಕೆಲಸಗಾರನನ್ನು ಸಿಟಿ ಮಾರುಕಟ್ಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಪೇಟೆ, ಅವೆನ್ಯೂ ರಸ್ತೆಯಲ್ಲಿರುವ ಮಾಯಾ ಸಿಲ್ಕ್ & ಸ್ಯಾರೀಸ್ ಅಂಗಡಿಯ ಮಾಲೀಕ ಉಮೇದ್ ರಾಮ್ ಮತ್ತು ಮತ್ತೊಬ್ಬ ಮಹೇಂದ್ರ ಶರ್ಮಾ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಅವೆನ್ಯೂ ರಸ್ತೆಯ ಮಾಯಾ ಸಿಲ್ಕ್ & ಸ್ಯಾರೀಸ್ ಅಂಗಡಿಗೆ ಆಂಧ್ರಪ್ರದೇಶದ ಗುಂತಕಲ್ ತಾಲ್ಲೂಕಿನ ಡೋಲು ಮುಖಲು ಹಂಪಮ್ಮ(೫೫) ಅವರು ಖರೀದಿಗೆ ತೆರಳಿದ್ದಾಗ ಸೀರೆ ಕಳವು ಮಾಡಿದ್ದಾಳೆ ಎಂದು ಆರೋಪಿಸಿ ಅಂಗಡಿಯಿಂದ ಹೊರಗೆಳೆದು ಹಲ್ಲೆ ನಡೆಸಿ, ಬೂಟುಗಾಲಿನಲ್ಲಿ ಒದ್ದಿದ್ದರು.
ಆಕೆಯ ಮಗನ ಮುಂದೆಯೇ ಉಮೇದ್ ರಾಮ್ ಮತ್ತು ಮಹೇಂದ್ರ ಶರ್ಮಾ ಅಮಾನುಷವಾಗಿ ನಡೆದುಕೊಂಡಿದ್ದರು. ಈ ಘಟನೆಯನ್ನು ಚಿತ್ರೀಕರಿಸಿ, ಅವೆನ್ಯೂ ರಸ್ತೆಯ ವ್ಯಾಪಾರಿಗಳ ಗ್ರೂಪ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲು ಮಾಡಲು ಸೂಚನೆ ನೀಡಿದ್ದು, ಕಾರ್ಯಾಚರಣೆ ಕೈಗೊಂಡ ಬಟ್ಟೆ ಅಂಗಡಿ ಮಾಲೀಕ ಉಮೇದ್ ರಾಮ್ ಮತ್ತು ಮತ್ತೊಬ್ಬ ಮಹೇಂದ್ರ ಶರ್ಮಾ ಎಂಬಿಬ್ಬರನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.