ಆಂಧ್ರ ಪ್ರದೇಶ : ಜೈಲು ಶಿಕ್ಷೆಯ ಸಜಾ ಅವಧಿಯನ್ನು ಶಿಕ್ಷಣ ಸಾಧನೆಗಾಗಿ ಕೈದಿಯೊಬ್ಬರು ಬಳಸಿಕೊಂಡು ಸಾಧನೆ ಮಾಡಿರುವ ಅಪರೂಪದ ಘಟನೆ ವರದಿಯಾಗಿದೆ. ಕಡಪ ಕೇಂದ್ರ ಕಾರಾಗೃಹದಲ್ಲಿರುವ ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿಯೊಬ್ಬ ತನ್ನ ಜೈಲು ಶಿಕ್ಷೆಯನ್ನು ಶೈಕ್ಷಣಿಕ ಪ್ರಯಾಣವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.
ಹೌದು, ತಮ್ಮ ಶಿಕ್ಷೆಯ ಅವಧಿಯಲ್ಲಿ ಜೈಲಿನಿಂದಲೇ ಶಿಕ್ಷಣ ಅಭ್ಯಾಸ ನಡೆಸಿ, ನಾಲ್ಕು ಪದವಿಗಳು ಮತ್ತು ಮೂರು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಇದೀಗ ತೆಲುಗು ರಾಜ್ಯಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಕ್ಕಾಗಿ ಚಿನ್ನದ ಪದಕ ಮತ್ತು ಪುಸ್ತಕ ಬಹುಮಾನಕ್ಕೂ ಪಾತ್ರರಾಗಿದ್ದಾರೆ.
ತಿರುಪತಿ ಜಿಲ್ಲೆಯ ಯೆರ್ಪೇಡು ಮಂಡಲದ ಚೆಂಗಳಪಲ್ಲಿ ಮೂಲದ ಜಿ. ಯುಗಂಧರ್ (43) ಈ ಶೈಕ್ಷಣಿಕ ಸಾಧನೆ ಮಾಡಿರುವ ಸಜಾಬಂಧಿ.
ಅಪ್ರಾಪ್ತ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ ಆರೋಪದ ಮೇಲೆ ಈತನಿಗೆ 2010ರಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕಡಪ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಈತ ಇದೀಗ ಅಲ್ಲಿಂದಲೇ ಅಧ್ಯಯನ ನಡೆಸಿದ್ದಾರೆ.
ಯುಗಂಧರ್ ಈ ಜೈಲು ಶಿಕ್ಷೆಯಿಂದ ಕುಗ್ಗುವ ಬದಲಾಗಿ ಶಿಕ್ಷಣವನ್ನು ಪಡೆಯುವ ಮೂಲಕ ಸುಧಾರಣೆ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ದೂರಶಿಕ್ಷಣದ ಮೂಲಕ ಇಂಟರ್ಮಿಡಿಯೇಟ್ ಪೂರ್ಣಗೊಳಿಸಿದರು. ಬಳಿಕ ಉನ್ನತ ಶಿಕ್ಷಣವನ್ನು ಪಡೆದರು. ಡಾ. ಬಿ.ಆರ್. ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದ ಮೂಲಕ, ಅವರು ನಾಲ್ಕು ಕಲಾ ಪದವಿಗಳನ್ನು ಪಡೆದಿದ್ದಾರೆ. ಜೊತೆಗೆ ಎರಡು ಹಳೆಯ ಪಠ್ಯಕ್ರಮದ ಅಡಿಯಲ್ಲಿ ಮತ್ತು ಎರಡು ಪರಿಷ್ಕೃತ ಪಠ್ಯಕ್ರಮದ ಅಡಿಯಲ್ಲಿ ಮತ್ತು ಮೂರು ಸ್ನಾತಕೋತ್ತರ ಪದವಿಗಳನ್ನು ಸಹ ಪಡೆದಿದ್ದಾರೆ.
ಶೈಕ್ಷಣಿಕ ವಿಷಯಗಳ ಜೊತೆಗೆ ಅವರು ಕಂಪ್ಯೂಟರ್ ಮತ್ತು ಮರಗೆಲಸದಲ್ಲಿ ತರಬೇತಿ ಪಡೆದಿದ್ದಾರೆ. ನ್ಯಾಕ್ ಪ್ರಮಾಣಪತ್ರವನ್ನು ಪಡೆದಿದ್ದು, ಜೈಲಿನೊಳಗೆ ಮೂರು ವರ್ಷಗಳ ಕಾಲ ಪ್ಯಾರಾಲೀಗಲ್ ಸ್ವಯಂಸೇವಕರಾಗಿಯೂ ಕೆಲಸ ಮಾಡಿದರು. ಬಿಎ ಪರೀಕ್ಷೆಗಳಲ್ಲಿ 8.02 ಜಿಪಿಎ ಪಡೆಯುವ ಮೂಲಕ ಅವರ ಸಮರ್ಪಣೆ ಫಲ ನೀಡಿತು. ಎರಡೂ ತೆಲುಗು ರಾಜ್ಯಗಳಲ್ಲಿ (ತೆಲಂಗಾಣ ಮತ್ತು ಆಂಧ್ರ ಪ್ರದೇಶ) ಅತ್ಯಂತ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಉತ್ತೀರ್ಣ ಆಗಿದ್ದಾರೆ.
ನಡೆಯಲಿರುವ ಡಾ. ಬಿ.ಆರ್. ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದ 26 ನೇ ಘಟಿಕೋತ್ಸವದಲ್ಲಿ ಯುಗಂಧರ್ ಅವರ ಸಾಧನೆಯನ್ನು ಗುರುತಿಸಿ ಚಿನ್ನದ ಪದಕ ಮತ್ತು ಪುಸ್ತಕ ಬಹುಮಾನವನ್ನು ನೀಡಲಾಗುವುದು ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದರು.