Home Art & Culture ಉಚ್ಚಿಲ ದಸರಾ ವೈಭವಕ್ಕೆ ಚಾಲನೆ : ಶಾರದೆ,ನವದುರ್ಗೆಯರ ಪ್ರತಿಷ್ಠೆ…!!

ಉಚ್ಚಿಲ ದಸರಾ ವೈಭವಕ್ಕೆ ಚಾಲನೆ : ಶಾರದೆ,ನವದುರ್ಗೆಯರ ಪ್ರತಿಷ್ಠೆ…!!

ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 4ನೇ ವರ್ಷದ ಉಡುಪಿ ಉಚ್ಚಿಲ ದಸರಾ 2025 ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹವನ್ನು ಶಾಲಿನಿ ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದೆ. ಪ್ರಧಾನ ಅರ್ಚಕ ವೇ.ಮೂ.ಕೆ.ವಿ. ರಾಘವೇಂದ್ರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಗೆ ಪ್ರತಿಷ್ಠಾಪೂಜೆ ಮತ್ತು ಮಹಾಪೂಜೆ ನಡೆದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಮಂಗಳಾರತಿ ಬೆಳಗಿ ಚಾಲನೆ ನೀಡಿದರು.

ಉಚ್ಚಿಲ ದಸರಾ ಪ್ರಯುಕ್ತ ಆಯೋಜಿಸಿರುವ ವಸ್ತುಪ್ರದರ್ಶನವನ್ನು ಎಸ್‌ಪಿ ಹರಿರಾಮ್ ಶಂಕರ್ ಮತ್ತು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಜಂಟಿಯಾಗಿ ಉದ್ಘಾಟಿಸಿದರು.

ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಸೇರಿದಂತೆ ಎಲ್ಲ ಗಣ್ಯರನ್ನು ನಾಡೋಜ ಜಿ. ಶಂಕರ್ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ದ.ಕ. ಮೊಗವೀರ ಮಹಾಜನ ಸಂಘ, ಕ್ಷೇತ್ರಾಡಳಿತ ಸಮಿತಿ, ಉಡುಪಿ ಉಚ್ಚಿಲ ದಸರಾ ಸಮಿತಿ, ದ.ಕ. ಮೊಗವೀರ ಮಹಿಳಾ ಮಹಾಜನ ಸಂಘ, ದ.ಕ. ಮೊಗವೀರ ಮಹಾಜನ ಸಂಘ ಮುಂಬಯಿ ಸಮಿತಿ, ಕಾಪು ನಾಲ್ಕು ಪಟ್ಣ ಮೊಗವೀರ ಸಭಾ, ನಾಲ್ಕು ಪಟ್ಣ ಮೊಗವೀರ ಮಹಿಳಾ ಸಭಾ, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ, ಉಪ್ಪಳದಿಂದ ಶೀರೂರುವರೆಗಿನ ಮೊಗವೀರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು. ಶರನ್ನವರಾತ್ರಿ ಪ್ರಾರಂಭೋತ್ಸವ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ, ಉದಯ ಪೂಜೆ, ಧಾನ್ಯಲಕ್ಷ್ಮೀ ಪೂಜೆ, ಚಂಡಿಕಾಹೋಮ, ಕಲ್ಪೋಕ್ತ ಪೂಜೆ, ಮಧ್ಯಾಹ್ನ ಪಲ್ಲ ಪೂಜೆ, ಅನ್ನಸಂತರ್ಪಣೆ, ಭಜನೆ, ಕುಂಕುಮಾರ್ಚನೆ, ಮಹಾಪೂಜೆಗಳು ನಡೆದವು.