Home Crime ಬೆಂಗಳೂರು : ಸುಜಾತ ಭಟ್’ಗೆ ರಕ್ಷಣೆ ಕೊಡಿ : ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ....

ಬೆಂಗಳೂರು : ಸುಜಾತ ಭಟ್’ಗೆ ರಕ್ಷಣೆ ಕೊಡಿ : ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಎಸ್‌ಐಟಿಗೆ ಪತ್ರ…!!

ಬೆಂಗಳೂರು : ಧರ್ಮಸ್ಥಳ ಕೇಸ್‌ ಬಗೆಗಿನ ಎಸ್‌ಐಟಿ ತನಿಖೆ ಮುಂದುವರಿದಿದ್ದು, ಚಿನ್ನಯ್ಯ ಬಂಧನದ ಬಳಿಕ ತನಿಖೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸುಜಾತ ಭಟ್‌ ವಿಚಾರದಲ್ಲೂ ಭಾರೀ ಚರ್ಚೆಗಳು ನಡೆಯುತ್ತಿವೆ.

ಈ ನಡುವೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಎಸ್‌ಐಟಿಗೆ ಪತ್ರವೊಂದನ್ನು ಬರೆದಿದ್ದು, ಸುಜಾತ ಭಟ್ ಅವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮನವಿ ಮಾಡಲಾಗಿದೆ.

ಡಾ.ನಾಗಲಕ್ಷ್ಮೀ ಚೌಧರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಎಸ್ಐಟಿ ರಚನೆಯಾಗಿ ಧರ್ಮಸ್ಥಳ ವಿಚಾರವಾಗಿ ತನಿಖೆ ನಡೆಯುತ್ತಿರುವ ವೇಳೆ ಸುಜಾತ ಭಟ್ ಮೇಲಾಗುತ್ತಿರುವ ಮಾನಸಿಕ ಕಿರುಕುಳ ಮಿತಿಮೀರಿದೆ. ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕೇ ಹೊರತು, ಮಹಿಳೆಯ ತೇಜೋವಧೆಯಿಂದಲ್ಲ ಎಂದು ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ, ಕೊಲೆ, ನಾಪತ್ತೆ ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ.

ಅನನ್ಯ ಭಟ್ ನಾಪತ್ತೆ ಪ್ರಕರಣದ ದೂರುದಾರೆ ಸುಜಾತ ಭಟ್ ಅವರನ್ನು ಕಳೆದ ಎರಡು ವಾರಗಳಿಂದ ಮಾಧ್ಯಮದವರು ನಿರಂತರವಾಗಿ ಹಿಂಬಾಲಿಸಿ ಹೇಳಿಕೆ ನೀಡಲು ಪೀಡಿಸುವುದು, ಅವರ ತೇಜೋವಧೆ ಮಾಡಿ ಹೀಯಾಳಿಸಿ ಸುದ್ದಿ ಮಾಡುವುದು, ತಡರಾತ್ರಿಯಲ್ಲಿ ಅವರ ಮನೆಗೆ ನುಗ್ಗಿ ವೀಡಿಯೊ ಚಿತ್ರೀಕರಣ ಮಾಡುವುದು, ಕಾರಿನಲ್ಲಿ ಕೂರಿಸಿಕೊಂಡು ತನಿಖೆಯ ದಿಕ್ಕು ತಪ್ಪಿಸುವ ಹಾಗೆ ವೈರುಧ್ಯಗಳಿಂದ ಕೂಡಿದ ಹೇಳಿಕೆ ಪಡೆದು, ಅವರನ್ನು ಮಾನಸಿಕವಾಗಿ ಕುಗ್ಗಿಸುವ ವರದಿ ಪ್ರಸಾರ ಮಾಡಿರುವುದನ್ನು ರಾಜ್ಯ ಮಹಿಳಾ ಆಯೋಗ ಗಮನಿಸಿದೆ.

ಮಹಿಳೆಯರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡಕ್ಕೆ ಮಹಿಳೆಯರು, ಸಂತ್ರಸ್ತರು, ನಿರ್ಭೀತಿಯಿಂದ ದೂರು ನೀಡಲು ಅವಕಾಶ ಮಾಡಿಕೊಟ್ಟು, ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಟ್ಟು ಅವರಿಗೆ ರಕ್ಷಣೆ ನೀಡುವಂತೆ ರಾಜ್ಯ ಮಹಿಳಾ ಆಯೋಗ ಒತ್ತಾಯಿಸುತ್ತದೆ.

ಈ ಪ್ರಕರಣದ ದೂರುದಾರೆ ಸುಜಾತ ಭಟ್‌ ಮಾಧ್ಯಮಗಳ ಒತ್ತಡದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿ ಹೋಗುವ ಸಂಭವವಿದೆ. ಈ ವಿಷಯವನ್ನು ರಾಜ್ಯ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ವಿಶೇಷ ತನಿಖಾ ತಂಡದಿಂದ ಸುಜಾತ ಭಟ್ ಅವರಿಗೆ ಭದ್ರತೆ ಒದಗಿಸಿ, ನಿರ್ಭೀತಿಯಿಂದ ಅವರು, ಅಹವಾಲು ಸಲ್ಲಿಸಲು ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ತುರ್ತಾಗಿ ಕಳುಹಿಸಿಕೊಡುವಂತೆ ಎಸ್ಐಟಿ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.