ಮಲ್ಪೆ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟಿನಿಂದ ಸಮುದ್ರಕ್ಕೆ ಬಿದ್ದು ಯುವ ಮೀನುಗಾರನೋರ್ವ ಕಾಣೆಯಾಗಿರುವ ಘಟನೆ ನಡೆದಿದೆ.
ಸಂಶಿ ಗ್ರಾಮದ ಕುರುಬರ ಓಣಿಯ ನಿವಾಸಿ ಶಿವಪ್ಪ ಹನುಮಪ್ಪ ಆಡೂರ (55) ಅವರ ಪುತ್ರ ಶಂಕರಗೌಡ ಶಿವಪ್ಪ ಆಡೂರ (26) ಕಾಣೆಯಾದ ಮೀನುಗಾರನಾಗಿದ್ದಾನೆ. ಆತ ದೇವರಾಜ ಕರ್ಕೇರಾ ಅವರ ಮಾಲೀಕತ್ವದ ‘ಜೈ ಸಂತೋಷಿ ಮಾತಾ’ ಹೆಸರಿನ IND-KA-02-MM-4982 ಸಂಖ್ಯೆಯ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುತ್ತಿದ್ದನು.
ದಿನಾಂಕ 17-05-2026 ರಂದು ಬೆಳಗಿನ ಜಾವ ಸುಮಾರು 12:30 ಗಂಟೆ ಸುಮಾರಿಗೆ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ಹಾಕಿದ್ದ ಬಲೆಯನ್ನು ಮೇಲಕ್ಕೆ ಎಳೆಯುವ ವೇಳೆ ಏಕಾಏಕಿ ದೊಡ್ಡ ಅಲೆ ಬಂದು ಬೋಟು ಅಲುಗಾಡಿದೆ. ಈ ವೇಳೆ ಶಂಕರಗೌಡ ಅವರು ಸಮುದ್ರದ ನೀರಿಗೆ ಬಿದ್ದು ಕಾಣೆಯಾಗಿರುವುದಾಗಿ ತಿಳಿದುಬಂದಿದೆ.
ಘಟನೆಯ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




